ಅತ್ಯಾಚಾರ ಪ್ರಕರಣದ ಆರೋಪಿಗೆ ಸುಪ್ರೀಂನಿಂದ ಮಧ್ಯಂತರ ಜಾಮೀನು
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ನಲ್ವತ್ತು ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ 23 ವರ್ಷದ ಆರೋಪಿಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ನೀಡಿದೆ. ಕಳೆದ ಒಂಬತ್ತು ತಿಂಗಳಿನಿಂದ ಕಾರಾಗೃಹದಲ್ಲಿ ಇದ್ದರೂ ಆತನ ವಿರುದ್ಧ ಆರೋಪ ಹೊರಿಸಲು ಸಾಧ್ಯವಾಗಿಲ್ಲ. ಅಲ್ಲದೆ, ಮಹಿಳೆ ಮಗುವಲ್ಲ. ಒಂದೇ ಕೈಯಿಂದ ಚಪ್ಪಾಳೆ ಸಾದ್ಯವಿಲ್ಲ ಎಂದು ಅದು ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಹಾಗೂ ಸತೀಶ್ ಚಂದ್ರ ಶರ್ಮಾ ಅವರನ್ನು ಒಳಗೊಂಡ ಪೀಠ ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾವ ಹೊಂದಿರುವ ಯುವಕನೊಂದಿಗೆ ಮಹಿಳೆ ಸ್ವಯಂಪ್ರೇರಿತವಾಗಿ ಹೋಗಿರುವಾಗ ಆತನ ವಿರುದ್ಧ ದಿಲ್ಲಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿರುವುದು ಹೇಗೆ ಎಂದು ತರಾಟೆಗೆ ತೆಗೆದುಕೊಂಡಿತು.
‘‘ಒಂದೇ ಕೈಯಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ನೀವು ಯಾವ ಆಧಾರದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿದಿರಿ. ಅವರು ಮಗುವಲ್ಲ. ಅವರಿಗೆ 40 ವರ್ಷ ಪ್ರಾಯವಾಗಿದೆ. ಅವರು ಜೊತೆಯಾಗಿ ಜಮ್ಮುಗೆ ಹೋಗಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಯಾಕೆ? ಈ ಮಹಿಳೆ ಆತನೊಂದಿಗೆ 7 ಬಾರಿ ಜಮ್ಮುವಿಗೆ ಹೋಗಿದ್ದಾರೆ. ಆದರೆ, ಆಕೆಯ ಪತಿಯೇ ಆಕ್ಷೇಪ ಎತ್ತಿಲ್ಲ’’ ಎಂದ ಪೀಠ ಅಭಿಪ್ರಾಯಿಸಿತು.
ಆರೋಪಿ ಕಳೆದ 9 ತಿಂಗಳಿಂದ ಕಾರಾಗೃಹದಲ್ಲಿದ್ದಾನೆ. ಆದರೂ ಆತನ ವಿರುದ್ಧ ಆರೋಪ ಹೊರಿಸಲು ಸಾಧ್ಯವಾಗಿಲ್ಲ. ಆದುದರಿಂದ ಈ ಪ್ರಕರಣ ಮಧ್ಯಂತರ ಜಾಮೀನು ನೀಡಲು ಸೂಕ್ತವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆರೋಪಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಷರತ್ತು ಹಾಗೂ ನಿಯಮಗಳಿಗೆ ಒಳಪಟ್ಟು ಮಧ್ಯಂತರ ಜಾಮೀನು ನೀಡಬೇಕು. ಆತ ತನ್ನ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಹಾಗೂ ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಅರ್ಜಿ ಸಲ್ಲಿಸಿದ ಯುವಕನನ್ನು ಕೂಡ ಟೀಕಿಸಿದ ಸುಪ್ರೀಂ ಕೋರ್ಟ್, ಅಂತಹ ಜನರಿಂದ ಯಾರು ಪ್ರಭಾವಿತರಾಗುತ್ತಾರೆ ಎಂದು ಪ್ರಶ್ನಿಸಿತು. ಆರೋಪಗಳ ಗಂಭೀರತೆ ಪರಿಗಣಿಸಿ ಜಾಮೀನು ನೀಡಲು ನಿರಾಕರಿಸಿದ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಈ ವ್ಯಕ್ತಿ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.