×
Ad

ತಾಂತ್ರಿಕ ದೋಷ, ಹಕ್ಕಿ ಬಡಿತ | 2 ಸ್ಪೈಸ್‌ಜೆಟ್ ವಿಮಾನಗಳು ತುರ್ತು ಭೂ ಸ್ಪರ್ಶ

Update: 2024-12-09 15:16 IST

PC : PTI 

ಹೊಸದಿಲ್ಲಿ : ತಾಂತ್ರಿಕ ದೋಷದಿಂದ ಎರಡು ಸ್ಪೈಸ್‌ಜೆಟ್ ವಿಮಾನಗಳು ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ಸೋಮವಾರ ನಡೆದಿದೆ.

ಒಂದು ವಿಮಾನವು ಶಿಲ್ಲಾಂಗ್‌ಗೆ ತೆರಳುತ್ತಿತ್ತು, ಇನ್ನೊಂದು ಕೊಚ್ಚಿಗೆ ತೆರಳುತ್ತಿತ್ತು. ತಾಂತ್ರಿಕ ದೋಷ ಕಂಡು ಬರುತ್ತಿದ್ದಂತೆ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಭೂ ಸ್ಪರ್ಶ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ದಿಲ್ಲಿ - ಶಿಲ್ಲಾಂಗ್ ನಡುವೆ ಸಂಚರಿಸುತ್ತಿದ್ದ ಸ್ಪೈಸ್‌ಜೆಟ್ ವಿಮಾನವು ಆಗಸ ಮಧ್ಯದಲ್ಲಿ ತಾಂತ್ರಿಕ ದೋಷವನ್ನು ಎದುರಿಸಿತು. ಕೂಡಲೇ ಅದನ್ನು ಪಾಟ್ನಾಗೆ ತಿರುಗಿಸಲಾಯಿತು. ವಿಮಾನವು ಪಾಟ್ನಾದ ಜಯಪ್ರಕಾಶ್ ನಾರಾಯಣ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 8.52 ಕ್ಕೆ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತು ಎಂದು ಪಾಟ್ನಾ ವಿಮಾನ ನಿಲ್ದಾಣದ ನಿರ್ದೇಶಕ ಅಂಚಲ್ ಪ್ರಕಾಶ್ ಹೇಳಿದ್ದಾರೆ.

ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದು ಸಾಮಾನ್ಯ ಲ್ಯಾಂಡಿಂಗ್ ಆಗಿತ್ತು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೊಂದು ಘಟನೆಯಲ್ಲಿ, 117 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಕೊಚ್ಚಿಗೆ ಹೋಗುತ್ತಿದ್ದ ಸ್ಪೈಸ್‌ಜೆಟ್ ವಿಮಾನಕ್ಕೆ ಆಗಸ ಮಧ್ಯದಲ್ಲಿ ಹಕ್ಕಿ ಬಡಿತದಿಂದ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ವಿಮಾನವು ಚೆನ್ನೈನಲ್ಲಿ ತುರ್ತು ಭೂ ಸ್ಪರ್ಶ ಮಾಡಿತು.

ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಪೈಸ್‌ಜೆಟ್ ವಕ್ತಾರರು, " ಡಿಸೆಂಬರ್ 9, 2024 ರಂದು ಚೆನ್ನೈನಿಂದ ಕೊಚ್ಚಿಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ಕ್ಯೂ400 ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ಚೆನ್ನೈಗೆ ಮರಳಿತು. ವಿಮಾನವು ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತು. ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು." ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News