ಜಾತಿಗಣತಿಯಿಂದ ಕೇಂದ್ರದ ನೀತಿಯಲ್ಲಿ ಅರ್ಥಪೂರ್ಣ ಸುಧಾರಣೆಯಾಗಲಿ: ತೇಜಸ್ವಿ ಯಾದವ್
ತೇಜಸ್ವಿ ಯಾದವ್ | PTI
ಪಾಟ್ನಾ: ಜನಗಣತಿಯ ಜೊತೆ ಜಾತಿಗಣತಿಯನ್ನು ಕೂಡಾ ನಡೆಸುವ ಕೇಂದ್ರ ಸರಕಾರದ ನಿರ್ಧಾರವನ್ನು ತೇಜಸ್ವಿ ಯಾದವ್ ಅವರು ರವಿವಾರ ಪ್ರಶಂಸಿಸಿದ್ದಾರೆ. ಕಡೆಗಣಿಸಲ್ಪಟ್ಟ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಹಾಗೂ ಪ್ರಾತಿನಿಧ್ಯದ ಅಗತ್ಯವನ್ನು ಪ್ರತಿಪಾದಿಸಿದ ಅವರು ಅರ್ಥಪೂರ್ಣವಾದ ಸುಧಾರಣೆಗಳ ಅಗತ್ಯವನ್ನು ಒತ್ತಿಹೇಳಿದ್ದಾರೆ.
ತೇಜಸ್ವಿ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದು, ಜಾತಿಗಣತಿ ನಡೆಸುವ ಮೋದಿ ಸರಕಾರದ ನಿರ್ಧಾರವು ಸಮಾನತೆಯೆಡೆಗೆ ಭಾರತದ ಪಯಣದಲ್ಲಿ ಒಂದು ಪರಿವರ್ತನಾತ್ಮಕ ಹೆಜ್ಜೆಯೆಂದು ಬಣ್ಣಿಸಿದ್ದಾರೆ. ಜಾತಿಗಣತಿಗಾಗಿ ಹೋರಾಟ ನಡೆಸಿರುವ ಕೋಟ್ಯಂತರ ಮಂದಿ ಕೇವಲ ದತ್ತಾಂಶಕ್ಕಾಗಿ ಮಾತ್ರ ಕಾದುಕುಳಿತಿಲ್ಲ ಅವರು ಘನತೆಯ ಬದುಕಿನ ನಿರೀಕ್ಷೆಯಲ್ಲಿದ್ದಾರೆ. ಅದುದರಿಂದ ಜಾತಿಗಣತಿಯು ಕೇವಲ ಎಣಿಕೆಯಲ್ಲ ಅದು ಸಬಲೀಕರಣವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪತ್ರವನ್ನು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಕೇಂದ್ರದ ಈ ನಡೆಯ ಬಗ್ಗೆ ಎಚ್ಚರಿಕೆಯೊಂದಿಗೆ ಆಶಾವಾದವನ್ನು ಹೊಂದಿದ್ದೇನೆ ಎಂದು ಯಾದವ್ ಪತ್ರದಲ್ಲಿ ಅಭಿಪ್ರಾಯಿಸಿದ್ದಾರೆ.‘‘ ಹಲವಾರು ವರ್ಷಗಳಿಂದ ಎನ್‌ಡಿಎ ಸರಕಾರವು ಜಾತಿಗಣತಿಯ ಬೇಡಿಕೆಯನ್ನು ವಿರೋಧಿಸಿತ್ತು ಮತ್ತು ಜಾತಿಗಣತಿಯು ಸಮಾಜವನ್ನು ವಿಭಜಿಸುತ್ತದೆ ಎಂದು ಅದು ವಾದಿಸಿತ್ತು. ಅಲ್ಲದೆ ಬಿಹಾರದಲ್ಲಿ ಜಾತಿಗಣತಿಗೆ ಕೇಂದ್ರ ಸರಕಾರವು ಪದೇ ಪದೇ ಅಡ್ಡಿಪಡಿಸಿತ್ತು ಮತ್ತು ಬಿಜೆಪಿಯ ನಾಯಕರು ಹಾಗೂ ಅಧಿಕಾರಿಗಳಿಂದಲೂ ವಿರೋಧ ವ್ಯಕ್ತವಾಗಿತ್ತು ಎಂದವರು ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ.
ಸಾಮಾಜಿಕ ನ್ಯಾಯಕ್ಕೆ ಜಾತಿಗಣತಿ ಅಂತಿಮ ಪರಿಹಾರವಲ್ಲ. ಆದರೆ ಸಾಮಾಜಿಕ ನ್ಯಾಯದೆಡೆಗೆ ಸಾಗುವ ದೀರ್ಘ ಪ್ರಯಾಣ ಇನ್ನೂ ಬಹುದೂರವಿದ್ದು, ಅದರಲ್ಲಿ ಜಾತಿಗಣತಿ ಮೊದಲ ಹೆಜ್ಜೆಯಷ್ಟೇ ಆಗಿದೆ ಎಂದವರು ಹೇಳಿದ್ದಾರೆ.
ಓಬಿಸಿ (ಇತರ ಹಿಂದುಳಿದ ವರ್ಗ) ಹಾಗೂ ಇಬಿಸಿ (ಆರ್ಥಿಕವಾಗಿಹಿಂದುಳಿದ ವರ್ಗ)ಗಳು ಬಿಹಾರದ ಜನಸಂಖ್ಯೆಯ ಶೇ.63ರಷ್ಟಿರುವುದನ್ನು ಬಿಹಾರದ ಜಾತಿಗಣತಿ ಸಮೀಕ್ಷೆಯು ಬಹಿರಂಗಪಡಿಸಿರುವುದನ್ನು ಪ್ರಸ್ತಾವಿಸಿದ ಅವರು ರಾಷ್ಟ್ರಮಟ್ಟದಲ್ಲಿಯೂ ಇದೇ ರೀತಿಯ ದತ್ತಾಂಶ ಲಭ್ಯವಾದಲ್ಲಿ ಮೀಸಲಾತಿಯಲ್ಲಿ ಯಥಾಸ್ಥಿತಿಯನ್ನು ಶಾಶ್ವತಗೊಳಿಸಿದ ಹಲವು ಮಿಥ್ಯೆಗಳನ್ನು ಜಾತಿಗಣತಿಯು ನುಚ್ಚುನೂರುಗೊಳಿಸಲಿದೆ ಎಂದು ತೇಜಸ್ವಿ ಯಾದವ್ ಪತ್ರದಲ್ಲಿ ಬರೆದಿದ್ದಾರೆ.