×
Ad

ತಿರುಪತಿ ದೇವಸ್ಥಾನದಲ್ಲಿ ಪಾವಿತ್ರ್ಯ ಮರುಸ್ಥಾಪನೆಗೆ ಧಾರ್ಮಿಕ ವಿಧಿವಿಧಾನ

Update: 2024-09-23 21:29 IST

PC : PTI 

ತಿರುಪತಿ : ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಮಲ ಬೆಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದ ವಿವಾದದ ನಡುವೆಯೇ, ಸೋಮವಾರ ದೇವಸ್ಥಾನದ ಪಾವಿತ್ರ್ಯವನ್ನು ಮರುಸ್ಥಾಪಿಸುವ ವಿಧಿವಿಧಾನಗಳನ್ನು ನಡೆಸಲಾಗಿದೆ.

ದೇವಸ್ಥಾನದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ನಾಲ್ಕು ಗಂಟೆಗಳ ಕಾಲ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಹಿಂದಿನ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ‘‘ಅಪವಿತ್ರ’’ ಆಚರಣೆಗಳಿಂದ ‘‘ಕೋಪಗೊಂಡಿರುವ’’ ದೇವರನ್ನು ಸಂತುಷ್ಟಿಗೊಳಿಸಲು ಈ ಹೋಮವನ್ನು ನಡೆಸಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

‘‘ಈ ವಿಧಿವಿಧಾನಗಳು ದುಷ್ಪರಿಣಾಮಗಳನ್ನು ಹೋಗಲಾಡಿಸುತ್ತವೆ ಮತ್ತು ಲಡ್ಡು ಪ್ರಸಾದದ ಪಾವಿತ್ರ್ಯವನ್ನು ಮರುಸ್ಥಾಪಿಸುತ್ತವೆ. ಜೊತೆಗೆ ಶ್ರೀವರಿ ಭಕ್ತರನ್ನು ಕಾಪಾಡುತ್ತವೆ’’ ಎಂದು ರವಿವಾರ ತಿರುಮಲ ತಿರುಪತಿ ದೇವಸ್ಥಾನಮ್ಸ್‌ನ ಕಾರ್ಯನಿರ್ವಹಣಾಧಿಕಾರಿ ಜೆ. ಶ್ಯಾಮಲಾ ರಾವ್ ಹೇಳಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನಮ್ಸ್ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುತ್ತದೆ.

ಹಿಂದಿನ ವೈಎಸ್‌ಆರ್‌ಸಿಪಿ ಸರಕಾರದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸಲಾಗಿರುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇತ್ತು ಎಂದು ಕಳೆದ ವಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ ಬಳಿಕ, ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎದ್ದಿದೆ.

ತಿರುಪತಿ ತಿರುಮಲ ದೇವಸ್ಥಾನವು ಪರೀಕ್ಷೆಗಾಗಿ ಕಳುಹಿಸಿರುವ ತುಪ್ಪದ ಮಾದರಿಗಳಲ್ಲಿ ದನದ ಕೊಬ್ಬು, ಹಂದಿ ಕೊಬ್ಬು ಮತ್ತು ಮೀನಿನ ಎಣ್ಣೆ ಪತ್ತೆಯಾಗಿದೆ ಎಂದು ಗುಜರಾತ್‌ನ ಪ್ರಯೋಗಾಲಯವೊಂದರ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News