×
Ad

2019-2024ರ ಅವಧಿಯಲ್ಲಿ ಕಲಬೆರಕೆ ತುಪ್ಪದಿಂದ 20 ಕೋಟಿ ಲಾಡುಗಳು ತಯಾರಾಗಿದ್ದವು: ತಿರುಪತಿಯ ಅಧಿಕಾರಿ

Update: 2025-11-22 20:48 IST

Photo Credit : PTI 

ತಿರುಮನ,ನ.22: ತಿರುಪತಿ ದೇವಸ್ಥಾದಲ್ಲಿ ಕಲಬೆರಕೆ ತುಪ್ಪವನ್ನು ಬಳಸಿ ಅಂದಾಜು 20 ಕೋಟಿ ಲಾಡುಗಳನ್ನು ತಯಾರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ದೇವಸ್ಥಾನದ ಪ್ರಸಾದದಲ್ಲಿ ಕಂಡು ಬಂದಿರುವ ಕಲ್ಮಶಗಳ ಕುರಿತು ತನಿಖೆ ಮುಂದುವರಿದೆ.

2019-2024ರ ಅವಧಿಯಲ್ಲಿ ವಿತರಿಸಲಾಗಿದ್ದ ಒಟ್ಟು 48.76 ಕೋಟಿ ಲಾಡುಗಳಲ್ಲಿ ಈ 20 ಕೋಟಿ ಲಾಡುಗಳೂ ಸೇರಿದ್ದವು ಎಂದು ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಟ್ರಸ್ಟ್‌ನ ಅಧ್ಯಕ್ಷ ಬಿ.ಆರ್.ನಾಯ್ಡು ತಿಳಿಸಿದರು.

ದೇವಸ್ಥಾನಕ್ಕೆ ಪ್ರತಿ ದಿನ ಆಗಮಿಸುವ ಭಕ್ತರ ಸಂಖ್ಯೆ, ಖರೀದಿ ವಿವರಗಳು ಹಾಗೂ ಉತ್ಪಾದನೆ ಮತ್ತು ಮಾರಾಟ ಅಂಕಿಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಸರಳ ಲೆಕ್ಕಾಚಾರದ ಆಧಾರದಲ್ಲಿ ಈ ಸಂಖ್ಯೆಯನ್ನು ಪಡೆಯಲಾಗಿದೆ.

ಕಲಬೆರಕೆಯು ಕಳೆದ ವರ್ಷ ಬೆಳಕಿಗೆ ಬಂದಿದ್ದು,ಪ್ರಸಾದವನ್ನು ಪವಿತ್ರ ಎಂದು ಪರಿಗಣಿಸುವ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿತ್ತು. ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡವು (ಸಿಟ್) ಈಗ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.

ತಾಳೆ ಎಣ್ಣೆ ಮತ್ತು ಇತರ ವಿಷಕಾರಿ ಪದಾರ್ಥಗಳು ಮಿಶ್ರಗೊಂಡಿದ್ದ ಸುಮಾರು 250 ಕೋಟಿ ರೂ.ಮೌಲ್ಯದ 68 ಲಕ್ಷ ಕೆ.ಜಿ.ಕಲಬೆರಕೆ ತುಪ್ಪವನ್ನು ಉತ್ತರಾಖಂಡದ ಭೋಲೆ ಬಾಬಾ ಡೇರಿ ಮತ್ತು ಅದರ ಶೆಲ್ ಕಂಪನಿಗಳು ಪೂರೈಸಿದ್ದವು ಎನ್ನುವುದನ್ನು ಸಿಟ್ ಪತ್ತೆ ಹಚ್ಚಿದೆ.

2019ರಿಂದ 2024ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ಅಂದಾಜು 11 ಕೋಟಿ ಜನರು ದೇವಸ್ಥಾನಕ್ಕೆ ಭೇಟಿ ನೀಡಿದ್ದು,ಕಲಬೆರಕೆ ತುಪ್ಪವನ್ನು ಬಳಸಿ ತಯಾರಿಸಿದ್ದ ಲಾಡುಗಳನ್ನು ಯಾರು ಸ್ವೀಕರಿಸಿದ್ದರು ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿದವು.

ವಿವಿಐಪಿ ಲಾಡುಗಳನ್ನು ಸಹ ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಿಲ್ಲ ಎಂದು ಟಿಟಿಡಿ ಒಪ್ಪಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟ್ ಇತ್ತೀಚಿಗೆ ಮಾಜಿ ಟಿಟಿಡಿ ಅಧ್ಯಕ್ಷ ಹಾಗೂ ವೈಎಸ್‌ಆರ್‌ಸಿಪಿ ಸಂಸದ ವೈ.ವಿ.ಸುಬ್ಬಾರೆಡ್ಡಿಯವರನ್ನು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಸ್ಯಾಂಪಲ್‌ಗಳಲ್ಲಿ ಕಲಬೆರಕೆಯನ್ನು ಪ್ರಯೋಗಾಲಯವು ಪತ್ತೆ ಹಚ್ಚಿದ್ದರೂ ತುಪ್ಪದ ಟ್ಯಾಂಕರ್‌ಗಳಿಗೆ ಏಕೆ ಅವಕಾಶ ನೀಡಲಾಗಿತ್ತು ಎಂಬ ಪ್ರಶ್ನೆಗೆ ಸುಬ್ಬಾರಾವ್, ವರದಿಯನ್ನು ಎಂದಿಗೂ ತನಗೆ ಸಲ್ಲಿಸಿರಲಿಲ್ಲ ಮತ್ತು ತಾಂತ್ರಿಕ ಸಮಿತಿಯ ಶಿಫಾರಸುಗಳ ಮೇರೆಗೆ ಖರೀದಿಯನ್ನು ಮಾಡಲಾಗಿತ್ತು ಎಂದು ಉತ್ತರಿಸಿದ್ದರು.

ಸುಬ್ಬಾರಾವ್ ಅವರ ಸಹಾಯಕ ಚಿನ್ನ ಅಪ್ಪಣ್ಣನನ್ನು ಸಿಟ್ ಈಗಾಗಲೇ ಬಂಧಿಸಿದೆ.

ಸಿಟ್ ಮಾಜಿ ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಎ.ವಿ.ಧರ್ಮರೆಡ್ಡಿ ಅವರನ್ನೂ ವಿಚಾರಣೆ ನಡೆಸಿದೆ. ಅದು ತನ್ನ ತನಿಖೆಯ ಪ್ರಮುಖ ಅಂಶಗಳನ್ನು ನೆಲ್ಲೂರಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದು,ಡಿ.15ರೊಳಗೆ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News