ಟಿಎಮ್‌ಸಿಯಿಂದ ಶೀಘ್ರವೇ ಎಸ್‌ಐಆರ್ ವಿರೋಧಿ ಅಭಿಯಾನ
ಮಮತಾ ಬ್ಯಾನರ್ಜಿ | Photo Credi : PTI
ಕೋಲ್ಕತಾ, ಅ. 17: ಹಬ್ಬದ ಬಳಿಕ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನೆ (ಎಸ್‌ಐಆರ್)ಯ ವಿರುದ್ಧ ಅಭಿಯಾನವೊಂದನ್ನು ಆರಂಭಿಸಲು ಪಶ್ಚಿಮಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಮ್‌ಸಿ) ನಿರ್ಧರಿಸಿದೆ.
ನವೆಂಬರ್‌ನಲ್ಲಿ ಕೋಲ್ಕತಾದಲ್ಲಿ ಬೃಹತ್ ಸಭೆಯೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಆ ಸಭೆಯಲ್ಲಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮಾತನಾಡುವ ಸಾಧ್ಯತೆಯಿದೆ. ‘‘ನವೆಂಬರ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದನ್ನು ನಡೆಸಲು ಉದ್ದೇಶಿಸಲಾಗಿದೆ. ಕೋಲ್ಕತಾದಲ್ಲಿ ನಡೆಯಲಿರುವ ಆ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಇಬ್ಬರೂ ಮಾತನಾಡುವ ನಿರೀಕ್ಷೆಯಿದೆ. ಸಭೆ ನಡೆಯುವ ಸ್ಥಳವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು’’ ಎಂದು ಹಿರಿಯ ಟಿಎಮ್‌ಸಿ ನಾಯಕರೊಬ್ಬರು ತಿಳಿಸಿದರು.
ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಚುನಾವಣಾ ಆಯೋಗವು ರಾಜ್ಯದಲ್ಲಿ ಅಕ್ಟೋಬರ್‌ನಲ್ಲಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಆರಂಭಿಸಲಿದೆ ಎಂಬ ಊಹಾಪೋಹಗಳು ಹರಡಿವೆ. ಇದಕ್ಕೆ ಇಂಬು ಕೊಡುವಂತೆ, ಭಾರತೀಯ ಚುನಾವಣಾ ಆಯೋಗವು ಸೆಪ್ಟಂಬರ್‌ನಲ್ಲಿ ಪಶ್ಚಿಮಬಂಗಾಳದಲ್ಲಿ ಜಿಲ್ಲಾ ಮಟ್ಟದ ಚುನಾವಣಾ ಅಧಿಕಾರಿಗಳಿಗೆ ತರಬೇತಿ ನೀಡಿತ್ತು.
ಉಪ ಚುನಾವಣಾ ಆಯುಕ್ತ ಜ್ಞಾನೇಶ್ ಭಾರತಿ ಅವರ ನೇತೃತ್ವದಲ್ಲಿ ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳ ತಂಡವೊಂದು ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿ, ಸಂಬಾವ್ಯ ವಿಶೇಷ ತೀವ್ರ ಪರಿಷ್ಕರಣೆಯ ಮುನ್ನ ಸಿದ್ಧತೆಗಳ ಬಗ್ಗೆ ಪರಿಶೀಲಿಸಲು ಸಭೆಗಳನ್ನು ನಡೆಸಿತ್ತು.
ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ವೇಳೆ, ನೈಜ ಮತದಾರರ ಹೆಸರುಗಳನ್ನು ತೆಗೆದುಹಾಕಿದರೆ ಪಶ್ಚಿಮಬಂಗಾಳದಲ್ಲಿ ಅನಪೇಕ್ಷಿತ ಪರಿಣಾಮಗಳು ಉಂಟಾಗುತ್ತವೆ ಎಂಬುದಾಗಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.
‘‘ಭಾರತೀಯ ಚುನಾವಣಾ ಆಯೋಗದ ನಾಲ್ವರು ಅಧಿಕಾರಿಗಳು, ಕ್ಷೇತ್ರ ಸಮೀಕ್ಷೆಯ ಹೆಸರಿನಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ ಮತ್ತು ದಾಖಲೆಗಳನ್ನು ಸಿದ್ಧಪಡಿಸುವಂತೆ ಸೂಚಿಸುತ್ತಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆಯನ್ನು ಬಿಹಾರದಲ್ಲಿ ನಡೆಸಬಹುದು. ಯಾಕೆಂದರೆ ಅಲ್ಲಿ ‘ಡಬಲ್-ಇಂಜಿನ್ ಬಿಜೆಪಿ ಸರಕಾರವಿದೆ. ಆದರೆ, ಬಂಗಾಳ ಭಿನ್ನವಾಗಿದೆ’’ ಎಂದು ಅವರು ಹೇಳಿದ್ದಾರೆ.
ಈ ತಿಂಗಳ ಆದಿ ಭಾಗದಲ್ಲಿ ರಾಜ್ಯ ಸರಕಾರಿ ಕಾರ್ಯಾಲಯದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಎಸ್‌ಐಆರ್ ಎನ್ನುವುದು ಎನ್‌ಆರ್‌ಸಿಯನ್ನು ಹಿಂಬಾಗಿಲ ಮೂಲಕ ಹೇರುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದರು.