×
Ad

ಉತ್ತರ ಪ್ರದೇಶ: ಅರ್ಜಿಯನ್ನೇ ಸಲ್ಲಿಸದ ದೇವಸ್ಥಾನಕ್ಕೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಅಡಿ ನೋಂದಣಿ ಭಾಗ್ಯ!

Update: 2025-01-25 16:15 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಕೇಂದ್ರ ಗೃಹ ಸಚಿವಾಲಯವು ಉತ್ತರ ಪ್ರದೇಶದ ವೃಂದಾವನದಲ್ಲಿಯ ಪ್ರಸಿದ್ಧ ಬಾಂಕೆ ಬಿಹಾರಿ ದೇವಸ್ಥಾನಕ್ಕೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ), 2010ರಡಿ ನೋಂದಣಿಯನ್ನು ಮಂಜೂರು ಮಾಡಿದೆ. ಇದರೊಂದಿಗೆ ದೇವಸ್ಥಾನವು ‘ಧಾರ್ಮಿಕ’ ಚಟುವಟಿಕೆಗಳಿಗೆಗಾಗಿ ವಿದೇಶಗಳಿಂದ ದೇಣಿಗೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಅಚ್ಚರಿಯೆಂದರೆ,ತಾವು ನೋಂದಣಿಗಾಗಿ ಎಂದೂ ಅರ್ಜಿಯನ್ನು ಸಲ್ಲಿಸಿರಲಿಲ್ಲ ಎಂದು ದೇವಸ್ಥಾನದ ಅರ್ಚಕರು ಹೇಳಿದ್ದಾರೆ ಎಂದು thehindu.com ವರದಿ ಮಾಡಿದೆ.

ದೇವಸ್ಥಾನದ ವ್ಯವಹಾರಗಳು ಮತ್ತು ಹಣಕಾಸಿನ ಮೇಲೆ ನಿಯಂತ್ರಣ ಕುರಿತು ದೇವಸ್ಥಾನ ಸಮಿತಿಯು ರಾಜ್ಯದ ಬಿಜೆಪಿ ನೇತೃತ್ವದ ಸರಕಾರದೊಂದಿಗೆ ಕಾನೂನು ಹೋರಾಟದಲ್ಲಿ ಸಿಲುಕಿಕೊಂಡಿದೆ. ಸಮಿತಿಯು ಸರಕಾರದಿಂದ ನಾಮ ನಿರ್ದೇಶಿತ ಸದಸ್ಯರನ್ನು ಒಳಗೊಂಡಿದೆ.

ಬಾಂಕೆ ಬಿಹಾರಿ ದೇವಸ್ಥಾನವು ಪ್ರಸ್ತುತ ಸೇವಾಯತ್ ಗೋಸ್ವಾಮಿ ಅರ್ಚಕರ ಆನುವಂಶಿಕ ಸಮುದಾಯ, ಸಾರಸ್ವತ ಬ್ರಾಹ್ಮಣರು ಮತ್ತು 550 ವರ್ಷಗಳ ಹಿಂದೆ ದೇವಸ್ಥಾನವನ್ನು ನಿರ್ಮಿಸಿದ್ದ ಸ್ವಾಮಿ ಹರಿದಾಸ ಅವರ ವಂಶಸ್ಥರ ಒಡೆತನ ಮತ್ತು ನಿರ್ವಹಣೆಯಲ್ಲಿದೆ.

ಪ್ರಸ್ತುತ ದೇವಸ್ಥಾನವು ಚಿನ್ನ ಮತ್ತು ಇತರ ಬೆಲೆಬಾಳುವ ಸೊತ್ತುಗಳನ್ನು ಹೊರತುಪಡಿಸಿ ಸುಮಾರು 480 ಕೋ.ರೂ.ಗಳ ನಿಧಿಯನ್ನು ಹೊಂದಿದೆ ಎಂದು ರಾಜ್ಯ ಸರಕಾರದಲ್ಲಿನ ಮೂಲಗಳು ತಿಳಿಸಿವೆ.

ಶುಕ್ರವಾರ ಕೇಂದ್ರ ಗೃಹ ಸಚಿವಾಲಯವು ವೃಂದಾವನದ ‘ಠಾಕೂರ ಶ್ರೀ ಬಾಂಕೆ ಬಿಹಾರಿಜಿ ಮಹಾರಾಜ ದೇವಸ್ಥಾನ’ಕ್ಕೆ ‘ಧಾರ್ಮಿಕ(ಹಿಂದು)’ ವರ್ಗದಡಿ ಎಫ್‌ಸಿಆರ್‌ಎ ನೋಂದಣಿಯನ್ನು ಮಂಜೂರು ಮಾಡಿದೆ.

ಸರಕಾರೇತರ ಸಂಸ್ಥೆ(ಎನ್‌ಜಿಒ)ಗಳು ಮತ್ತು ಸಂಘಗಳು ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ಎಫ್‌ಸಿಆರ್‌ಎ 2010ರಡಿ ನೋಂದಣಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದೇವಸ್ಥಾನದ ಅರ್ಚಕರಲ್ಲೋರ್ವರಾದ ಅಶೋಕ ಗೋಸ್ವಾಮಿಯವರು,ಎಫ್‌ಸಿಆರ್‌ಎ ಪರವಾನಿಗೆ ಅರ್ಜಿಯ ಬಗ್ಗೆ ತನಗೆ ತಿಳಿದಿಲ್ಲ. ಕಳೆದ ಹಲವಾರು ವರ್ಷಗಳಿಂದಲೂ ದೇವಸ್ಥಾನವು ಇಲ್ಲಿಗೆ ಭೇಟಿ ನೀಡುವ ವಿದೇಶಗಳಲ್ಲಿ ವಾಸವಿರುವ ಭಕ್ತರಿಂದ ದೇಣಿಗೆಗಳನ್ನು ಸ್ವೀಕರಿಸುತ್ತಿದೆ ಎಂದು ತಿಳಿಸಿದರು.

‘ಸಿವಿಲ್ ನ್ಯಾಯಾಧೀಶರು(ಜ್ಯೂನಿಯರ್ ವಿಭಾಗ) ರಚಿಸಿದ ಸಮಿತಿಯು ದೇವಸ್ಥಾನವನ್ನು ನಡೆಸುತ್ತಿದೆ. ದೇವಸ್ಥಾನದ ಆಸ್ತಿಯ ಒಡೆತನವನ್ನು ಹೊಂದಿರುವ ನಮ್ಮಂತಹ ಗೋಸ್ವಾಮಿಗಳ ಜೊತೆಗೆ ಹಲವಾರು ಹೊರಗಿನವರೂ ಸಮಿತಿಯ ಸದಸ್ಯರಾಗಿದ್ದಾರೆ. ಎಫ್‌ಸಿಆರ್‌ಎ ಪರವಾನಿಗೆಗೆ ಅರ್ಜಿಯನ್ನು ಯಾರು ಸಲ್ಲಿಸಿದ್ದರು ಎಂಬ ಬಗ್ಗೆ ನಾನೇನೂ ಹೇಳಲು ಸಾಧ್ಯವಿಲ್ಲ, ಆದರೆ ಯಾವುದೇ ಅರ್ಚಕರು ಅದಕ್ಕಾಗಿ ಅರ್ಜಿಯನ್ನು ಸಲ್ಲಿಸಿರಲಿಲ್ಲ’ ಎಂದು ತಿಳಿಸಿದ ಗೋಸ್ವಾಮಿ, ಭಕ್ತರಿಂದ ನೇರವಾಗಿ ಅರ್ಚಕರಿಗೆ, ಚೆಕ್‌ಗಳು ಅಥವಾ ಇತರ ಡಿಜಿಟಲ್ ಪಾವತಿಗಳು ಹಾಗೂ ಕಾಣಿಕೆ ಹುಂಡಿಯ ಮೂಲಕ, ಹೀಗೆ ಮೂರು ವಿಧಗಳಲ್ಲಿ ದೇವಸ್ಥಾನಕ್ಕೆ ದೇಣಿಗೆಗಳು ಬರುತ್ತವೆ ಎಂದರು. ಇದು ದೇವಸ್ಥಾನವನ್ನು ಇನ್ನೊಂದು ವಿವಾದಕ್ಕೆ ಸಿಲುಕಿಸುವ ಪಿತೂರಿಯಂತೆ ಕಂಡು ಬರುತ್ತಿದೆ ಎಂದು ಅವರು ಆರೋಪಿಸಿದರು.

ಭಕ್ತರಿಗೆ ಸುಗಮ ದರ್ಶನ ಮತ್ತು ಜನಸಂದಣಿ ನಿರ್ವಹಣೆಗೆ ಅನುಕೂಲವಾಗುವಂತೆ ಕಾಶಿ ವಿಶ್ವನಾಥ ಮಂದಿರದ ಮಾದರಿಯಲ್ಲಿ ದೇವಸ್ಥಾನ ಸುತ್ತ ಕಾರಿಡಾರ್ ನಿರ್ಮಿಸುವ ರಾಜ್ಯ ಸರಕಾರದ ಪ್ರಸ್ತಾವದ ವಿರುದ್ಧ ಗೋಸ್ವಾಮಿ ಸಮುದಾಯದ ಸದಸ್ಯರು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 2022ರಲ್ಲಿ ಕೃಷ್ಣಾಷ್ಟಮಿ ಸಂದರ್ಭದಲ್ಲಿ ದೇವಸ್ಥಾನದೊಳಗೆ ವಿಪರೀತ ಜನದಟ್ಟಣೆಯಿಂದಾಗಿ ಇಬ್ಬರು ಭಕ್ತರು ಉಸಿರುಗಟ್ಟಿ ಸಾವನ್ನಪ್ಪಿದ ಬಳಿಕ ಕಾರಿಡಾರ್ ನಿರ್ಮಾಣವು ಅಗತ್ಯವಾಗಿದೆ ಎಂದು ಸರಕಾರವು ನ್ಯಾಯಾಲಯದಲ್ಲಿ ಪ್ರತಿಪಾದಿಸಿದೆ.

ಹಿಂದಿನ ವಿಚಾರಣೆಗಳಲ್ಲಿ ದೇವಸ್ಥಾನದ ನಿಧಿಗಳು ಸೇರಿದಂತೆ ಅದರ ವ್ಯವಹಾರಗಳಲ್ಲಿ ಮಧ್ಯ ಪ್ರವೇಶಿಸದಂತೆ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಸೂಚಿಸಿದೆ,ಆದರೆ ಕಾರಿಡಾರ್ ಯೋಜನೆಯನ್ನು ಮುಂದುವರಿಸಲು ಅವಕಾಶ ನೀಡಿದೆ. ಸದ್ಯಕ್ಕೆ ವಿಷಯವು ವಿಚಾರಣಾಧೀನವಾಗಿದೆ.

ಇನ್ನೋರ್ವ ಅರ್ಚಕ ಗೋಪಿ ಗೋಸ್ವಾಮಿ ಅವರೂ ಪಿತೂರಿಯನ್ನು ಆರೋಪಿಸಿದರು. ‘ನಮಗೆ ಎಫ್‌ಸಿಆರ್‌ಎ ನೋಂದಣಿ ಬೇಕೇ ಎಂದು ಅವರು ನಮ್ಮನ್ನು ಎಂದಿಗೂ ಕೇಳಿರಲಿಲ್ಲ. ಎಂದಾದರೊಂದು ದಿನ ಈ ಖಾತೆಯಲ್ಲಿ ಯಾದ್ರಚ್ಛಿಕವಾಗಿ ಅಕ್ರಮ ಹಣ ಸಂದಾಯವಾಗಬಹುದು ಮತ್ತು ಆಗ ಸರಕಾರವು ನಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ಇದು ದೇವಸ್ಥಾನದ ಹೆಸರನ್ನು ಕೆಡಿಸಲು ತಂತ್ರವಾಗಿದೆ. ಎಫ್‌ಸಿಆರ್‌ಎ ಪರವಾನಿಗೆಯ ಅಗತ್ಯವೇನಿದೆ ಮತ್ತು ನಮ್ಮೊಂದಿಗೆ ಸಮಾಲೋಚಿಸದೆ ಅದಕ್ಕೆ ಅರ್ಜಿ ಸಲ್ಲಿಸಿದ್ದು ಏಕೆ ಎಂದು ನಾವು ಆಡಳಿತ ಸಮಿತಿಯನ್ನು ಪ್ರಶ್ನಿಸಲಿದ್ದೇವೆ ’ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News