ಉತ್ತರ ಪ್ರದೇಶ | ಸಂಭಾಲ್ ನ ದೇವಾಲಯದಿಂದ ಸಾಯಿಬಾಬಾ ವಿಗ್ರಹ ತೆರವು; ಗಂಗಾ ನದಿಯಲ್ಲಿ ವಿಸರ್ಜನೆ
PC: X \ @HateDetectors
ಸಂಭಾಲ್,ಆ.26: ಉತ್ತರಪ್ರದೇಶದ ಸಂಬಾಲ್ ನ ಶಿವ ದೇವಸ್ಥಾನವೊಂದರಲ್ಲಿದ್ದ ಸಾಯಿಬಾಬಾ ಅವರ ವಿಗ್ರಹವನ್ನು ಮಂಗಳವಾರ ಬೆಳಗ್ಗೆ ತೆರವುಗೊಳಿಸಲಾಗಿದ್ದು, ಆನಂತರ ಅದನ್ನು ವಿಧ್ಯುಕ್ತವಾಗಿ ಗಂಗಾನದಿಯಲ್ಲಿ ವಿಸರ್ಜನೆಗೊಳಿಸಲಾಯಿತು ದೇಗುಲದ ಮೂಲಗಳು ತಿಳಿಸಿವೆ.
ಸಾಯಿಬಾಬಾ ವಿಗ್ರಹವಿದ್ದ ಜಾಗದಲ್ಲಿ ಗಣೇಶ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ದೇವಾಲಯದ ಸಮಿತಿ ಹಾಗೂ ಭಕ್ತಾದಿಗಳು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಸಾಯಿಬಾಬಾ ಅವರಿಗೆ ಹಿಂದೂ ಧರ್ಮಗ್ರಂಥಗಳಲ್ಲಿ ಅಥವಾ ಪರಂಪರೆಯಲ್ಲಿ ಯಾವುದೇ ಸ್ಥಾನವಿಲ್ಲವೆಂದು ದೇವಾಲಯದ ಆರ್ಚಕ ಪಂಡಿತ್ ಅವನೀಶ್ ಶಾಸ್ತ್ರಿ ತಿಳಿಸಿದ್ದಾರೆ.
‘‘ಯಾವುದೇ ಫಕೀರ ಅಥವಾ ವ್ಯಕ್ತಿಯ ಆರಾಧನೆಯು ಖಾಸಗಿ ಸ್ಥಳಗಳಿಗೆ ಸೀಮಿತವಾಗಿರಬೇಕೇ ಹೊರತು ದೇವಾಲಯಗಳಲ್ಲಿ ಅಲ್ಲ. ಆದಿ ಶಂಕರಾಚಾರ್ಯ ಅಥವಾ ತುಳಸಿದಾಸ ಅವರಂತಹ ಮಹಾನ್ ಸಂತರು ಹಾಗೂ ತತ್ವಜ್ಞಾನಿಗಳ ವಿಗ್ರಹಗಳೇ ಇಲ್ಲದಿರುವಾಗ, ಸಾಯಿಬಾಬಾ ವಿಗ್ರಹ ಯಾಕಿರಬೇಕು? ಈ ವಿಗ್ರಹವನ್ನು 2011ರಲ್ಲಿ ಪ್ರತಿಷ್ಠಾಪಿಸಲಾಯಿತು. 14 ವರ್ಷಗಳ ಆನಂತರ ಸಮಿತಿಯ ಅನುಮೋದನೆಯೊಂದಿಗೆ ಅದನ್ನು ವಿಸರ್ಜಿಸಲು ನಿರ್ಧರಿಸಿದೆವು. ದೇವಾಲಯದ ಭಕ್ತಾದಿಗಳು ಕೂಡಾ ಈ ನಡೆಯನ್ನು ಬೆಂಬಲಿಸಿದ್ದಾರೆ. ಸಾಯಿಬಾಬಾ ವಿಗ್ರಹವನ್ನು ಇತ್ತೀಚಿನ ವರ್ಷಗಳಲ್ಲಿ ಪೂಜಿಸಲಾಗುತ್ತಿರಲಿಲ್ಲವೆಂದು ಅವರು ಹೇಳಿದ್ದಾರೆ.