×
Ad

ಉತ್ತರ ಪ್ರದೇಶ| ವಿದ್ಯಾರ್ಥಿನಿಗೆ ಕಿರುಕುಳ ನೀಡಿ ವಿವಸ್ತ್ರಗೊಳಿಸಿದ ದುಷ್ಕರ್ಮಿಗಳು

Update: 2023-11-02 23:21 IST

Source: X/technexiitbhu

ವಾರಣಾಸಿ, ನ. 2: ಐಐಟಿ-ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಗೆ ಮೋಟಾರುಸೈಕಲ್‌ನಲ್ಲಿ ಆಗಮಿಸಿದ ಮೂವರು ದುಷ್ಕರ್ಮಿಗಳು ಕಿರುಕುಳ ನೀಡಿ ವಿವಸ್ತ್ರಗೊಳಿಸಿದ್ದಾರೆ. ಅಲ್ಲದೆ, ಕೃತ್ಯದ ವೀಡಿಯೊ ದಾಖಲು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯಲ್ಲಿ ಹೊರಗಿನವರು ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿರುವ ಅವರು, ಹೊರಗಿನವರು ಕ್ಯಾಂಪಸ್ ಪ್ರವೇಶಿಸುವುದನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ.

ತಾನು ಬುಧವಾರ ರಾತ್ರಿ ಐಐಟಿ-ಬಿಎಚ್‌ಯು ಕ್ಯಾಂಪಸ್‌ನಲ್ಲಿ ಗೆಳೆಯರೊಂದಿಗೆ ಹೊರಗಡೆ ಇದ್ದೆ. ನಾವು ಕರ್ಮನ್ ಬಾಬಾ ದೇವಾಲಯದ ಸಮೀಪ ಬರುವಾಗ ಮೂವರು ಮೋಟಾರು ಸೈಕಲ್‌ನಲ್ಲಿ ಆಗಮಿಸಿದರು. ತನ್ನನ್ನು ಬಲವಂತವಾಗಿ ಬದಿಗೆ ಎಳೆದೊಯ್ದರು. ತನ್ನನ್ನು ಗೆಳೆಯರಿಂದ ಪ್ರತ್ಯೇಕಿಸುವ ಮುನ್ನ ಬಾಯಿ ಮುಚ್ಚಿದರು ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಅನಂತರ ದುಷ್ಕರ್ಮಿಗಳು ತನ್ನನ್ನು ವಿವಸ್ತ್ರಗೊಳಿಸಿದರು, ವೀಡಿಯೊ ರೆಕಾರ್ಡ್ ಮಾಡಿದರು, ಫೋಟೊ ತೆಗೆದರು. 15 ನಿಮಿಷಗಳ ಕಾಲ ಕಿರುಕುಳ ನೀಡಿದ ಬಳಿಕ, ತನ್ನ ಮೊಬೈಲು ಕಸಿದುಕೊಂಡು ಪರಾರಿಯಾದರು ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಯುವತಿಯ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಗುರುತಿಸಲು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News