×
Ad

ಉತ್ತರಾಖಂಡ ಹಿಮಪಾತ | ಇನ್ನೂ ಮೂರು ಮೃತದೇಹಗಳು ಪತ್ತೆ

Update: 2025-03-02 21:55 IST

PC : PTI 

ಡೆಹ್ರಾಡೂನ್: ರಕ್ಷಣಾ ತಂಡಗಳು ರವಿವಾರ ಇನ್ನೂ ಮೂರು ಮೃತದೇಹಗಳನ್ನು ಪತ್ತೆ ಹಚ್ಚುವುದರೊಂದಿಗೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ್ದ ಹಿಮಪಾತದಿಂದ ಮೃತರ ಸಂಖ್ಯೆ ಏಳಕ್ಕೇರಿದ್ದು,ನಾಪತ್ತೆಯಾಗಿರುವ ಓರ್ವ ಕಾರ್ಮಿಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮಾನಾ ಗ್ರಾಮದ ಬಳಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸುತ್ತಿದ್ದ ಗಡಿ ರಸ್ತೆಗಳ ಸಂಸ್ಥೆಯ ಕಾರ್ಮಿಕರ ಶಿಬಿರಕ್ಕೆ ಹಿಮಪಾತ ಅಪ್ಪಳಿಸಿತ್ತು.

ಪ್ರತಿಕೂಲ ಹವಾಮಾನದ ನಡುವೆ ಸೇನೆಯು ದಿಲ್ಲಿಯಿಂದ ತರಲಾಗಿರುವ ಶ್ವಾನದಳ,ಥರ್ಮಲ್ ಇಮೇಜಿಂಗ್ ಕ್ಯಾಮೆರಾಗಳು ಮತ್ತು ಹೆಲಿಕಾಪ್ಟರ್‌ಗಳ ನೆರವಿನೊಂದಿಗೆ ಗ್ರೌಂಡ್ ಪೆನೆಟ್ರೇಟರ್ ರಾಡಾರ್(ಜಿಪಿಆರ್)ಬಳಸಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಶನಿವಾರದವರೆಗೆ ಹಿಮದಡಿ ಹೂತುಹೋಗಿದ್ದ 50 ಕಾರ್ಮಿಕರನ್ನು ಹೊರತೆಗೆಯಲಾಗಿದ್ದು,ಈ ಪೈಕಿ ನಾಲ್ವರು ಮೃತಪಟ್ಟಿದ್ದರು.

ಕಾರ್ಮಿಕರು ಉಳಿದುಕೊಂಡಿದ್ದ ನಾಪತ್ತೆಯಾಗಿರುವ ಮೂರು ಕಂಟೇನರ್‌ಗಳನ್ನು ಪತ್ತೆ ಹಚ್ಚಲು ರಕ್ಷಣಾ ತಂಡಗಳು ರವಿವಾರ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ.

ಐದು ಕಂಟೇನರ್‌ಗಳನ್ನು ಪತ್ತೆ ಹಚ್ಚಲಾಗಿದೆ,ಆದರೆ ಆರಡಿಗೂ ಅಧಿಕ ಹಿಮ ಬಿದ್ದಿರುವುದರಿಂದ ಉಳಿದ ಮೂರು ಕಂಟೇನರ್‌ಗಳು ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ನಂದಕಿಶೋರ ಜೋಶಿ ತಿಳಿಸಿದರು.

ಪ್ರದೇಶದಲ್ಲಿ ಬೀಳುತ್ತಿರುವ ಮಳೆ ಮತ್ತು ಹಿಮಪಾತ ರಕ್ಷಣಾ ಕಾರ್ಯಾಚರಣೆಗಳಿಗೆ ಅಡ್ಡಿಯನ್ನುಂಟು ಮಾಡುತ್ತಿವೆ.

ಶುಕ್ರವಾರ ಸಂಭವಿಸಿದ್ದ ಹಿಮಪಾತದಲ್ಲಿ ಎಂಟು ಕಂಟೇನರ್ ಮತ್ತು ಒಂದು ಶೆಡ್‌ನಲ್ಲಿ ವಾಸವಿದ್ದ 55 ಕಾರ್ಮಿಕರು ಹೂತು ಹೋಗಿದ್ದರು. ಆದರೆ ಹಿಮಾಚಲ ಪ್ರದೇಶದ ಓರ್ವ ಕಾರ್ಮಿಕ ಅನಧಿಕೃತವಾಗಿ ರಜೆಯಲ್ಲಿ ತೆರಳಿರುವುದು ಗೊತ್ತಾದ ಬಳಿಕ ಕಾರ್ಮಿಕರ ಸಂಖ್ಯೆಯನ್ನು 54ಕ್ಕೆ ಪರಿಷ್ಕರಿಸಲಾಗಿತ್ತು.

ಈ ನಡುವೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಅವರು ಇಲ್ಲಿಯ ಉತ್ತರಾಖಂಡ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಘಟನಾ ಸ್ಥಳದಲ್ಲಿ ಭಾರತೀಯ ಸೇನೆಯೊಂದಿಗೆ ಐಟಿಬಿಪಿ,ಎನ್‌ಡಿಆರ್‌ಎಫ್,ಎಸ್‌ಆರ್‌ಡಿಎಫ್ ಮತ್ತು ಇತರ ಪರಿಹಾರ ಮತ್ತು ರಕ್ಷಣಾ ತಂಡಗಳೂ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸೇನೆಯ ಮೂರು,ವಾಯಪಡೆಯ ಎರಡು ಸೇರಿದಂತೆ ಒಟ್ಟು ಆರು ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ.

ಬದರೀನಾಥ ಕ್ಷೇತ್ರದಿಂದ ಮೂರು ಕಿ.ಮೀ.ಅಂತರದಲ್ಲಿರುವ ಮಾನಾ 3,200 ಮೀ.ಎತ್ತರದಲ್ಲಿದ್ದು, ಭಾರತ-ಟಿಬೆಟ್ ಗಡಿಯಲ್ಲಿನ ಕೊನೆಯ ಗ್ರಾಮವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News