×
Ad

ಉತ್ತರಾಖಂಡದ ಗ್ರಾಮದಲ್ಲಿ ಒಂದೇ ವಾರದಲ್ಲಿ ನಿಗೂಢ ಕಾಯಿಲೆಗೆ 91 ಜಾನುವಾರುಗಳು ಬಲಿ

Update: 2025-05-24 20:45 IST

PC : indiatoday.in

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಮೋರಿ ಬ್ಲಾಕ್‌ನ ಧಾರಾ ಗ್ರಾಮದಲ್ಲಿ ನಿಗೂಢ ಕಾಯಿಲೆಯೊಂದು ಕಾಣಿಸಿಕೊಂಡಿದ್ದು, ಒಂದೇ ವಾರದ ಅವಧಿಯಲ್ಲಿ 91ಕ್ಕೂ ಅಧಿಕ ಕುರಿಗಳು ಮತ್ತು ಮೇಕೆಗಳು ಸಾವನ್ನಪ್ಪಿವೆ. ಈ ಸಾಂಕ್ರಾಮಿಕ ರೋಗವು ಸ್ಥಳೀಯ ಜಾನುವಾರು ಸಾಕಣೆದಾರರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಹಲವಾರು ಪ್ರಾಣಿಗಳು ಈ ಗುರುತಿಸಲಾಗದ ಕಾಯಿಲೆಯಿಂದ ಬಳಲುತ್ತಿದ್ದು, ಹೆಚ್ಚಿನ ನಷ್ಟ ಸಂಭವಿಸುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.

ಪಶು ಸಂಗೋಪನಾ ಇಲಾಖೆಯು ರೋಗ ಹರಡುವಿಕೆಯನ್ನು ತಡೆಗಟ್ಟಲು ಮತ್ತು ತುರ್ತು ಚಿಕಿತ್ಸೆಯನ್ನು ಒದಗಿಸಲು ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಮೂರು ಪಶು ವೈದ್ಯಕೀಯ ತಂಡಗಳನ್ನು ನಿಯೋಜಿಸಿದೆ. ಆದರೆ ಈ ತೀವ್ರ ಪ್ರಯತ್ನಗಳ ಹೊರತಾಗಿಯೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಪಶು ಸಂಗೋಪನಾ ಇಲಾಖೆಯ ತಂಡಗಳನ್ನು ಶನಿವಾರದಿಂದ ಗ್ರಾಮದಲ್ಲಿ ನಿಯೋಜಿಸಲಾಗಿದೆ. ಅವರು ಪೀಡಿತ ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರಾದರೂ ಈವರೆಗೆ ಯಾವುದೇ ಪರಿಹಾರ ಕಂಡುಬಂದಿಲ್ಲ ಎಂದು ಹೇಳಿದ ಗ್ರಾಮ ಪ್ರಧಾನ ರಣದೇವ ಸಿಂಗ್ ಪನ್ವಾರ್ ಅವರು, ಪ್ರತಿ ದಿನ ಎರಡರಿಂದ ನಾಲ್ಕು ಜಾನುವಾರುಗಳು ಸಾಯುತ್ತಿವೆ ಮತ್ತು ಈವರೆಗೆ 91 ಜಾನುವಾರುಗಳು ಸಾವನ್ನಪ್ಪಿವೆ ಎಂದು ತಿಳಿಸಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮುಖ್ಯ ಪಶು ವೈದ್ಯಾಧಿಕಾರಿ ಹರಿಸಿಂಗ್ ಬಿಷ್ಟ್ ಅವರು,‘ಸಾಕಣೆದಾರರು ನಮಗೆ ತಿಳಿಸಿರುವಂತೆ ಒಟ್ಟು 20 ಕುರಿಗಳು ಮತ್ತು ಮೇಕೆಗಳು ಸಾವನ್ನಪ್ಪಿವೆ. ನಿರ್ಜಲೀಕರಣದ ಜೊತೆಗೆ ನ್ಯುಮೋನಿಯಾ ಮತ್ತು ಅತಿಸಾರ ಸಾವುಗಳಿಗೆ ಪ್ರಮುಖ ಕಾರಣವಾಗಿದ್ದು, ಪ್ರತಿಕೂಲ ಹವಾಮಾನವೂ ತನ್ನ ಕೊಡುಗೆಯನ್ನು ನೀಡಿರಬಹುದು ಎಂದು ತಿಳಿಸಿದರು.

ಕಾಯಿಲೆಯನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡಲು ವೈದ್ಯಕೀಯ ತಂಡಗಳು ನಿರಂತರವಾಗಿ ಶ್ರಮಿಸುತ್ತಿವೆ. ಈವರೆಗೆ 250ಕ್ಕೂ ಅಧಿಕ ಕುರಿಗಳು ಮತ್ತು ಮೇಕೆಗಳಿಗೆ ಲಸಿಕೆ ಹಾಕಲಾಗಿದೆ ಮತ್ತು ಚಿಕಿತ್ಸೆ ನೀಡಲಾಗಿದೆ ಎಂದು ಪಶು ವೈದ್ಯಾಧಿಕಾರಿ ಡಾ.ರಜನೀಶ್ ಸ್ವಾಮಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News