×
Ad

ಎಸ್‌ಐಆರ್ ಬಳಿಕ ಮತದಾರರ ಪಟ್ಟಿಯಿಂದ ಹೊರಗುಳಿಯುವ ಭೀತಿ; ಪಶ್ಚಿಮ ಬಂಗಾಳದಲ್ಲಿ ಕನಿಷ್ಠ 10 ಮಂದಿ ಮೃತ್ಯು

Update: 2025-11-10 20:48 IST

ಸಾಂದರ್ಭಿಕ ಚಿತ್ರ | Photo Credit : newindianexpress.com

ಕೋಲ್ಕತಾ, ನ. 10: ಭಾರತೀಯ ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ಕಳೆದ ತಿಂಗಳು ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಘೋಷಿಸಿದ ಬಳಿಕ ಮತದಾರರ ಪಟ್ಟಿಯಿಂದ ಹೊರಗುಳಿಯುವ ಭೀತಿಯಿಂದ ಈವರೆಗೆ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ.

2002ರ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಕಾಣೆಯಾಗಿದೆ ಎಂದು ತಿಳಿದ ನಂತರ ನಾಡಿಯಾ ಜಿಲ್ಲೆಯ ಕೃಷ್ಣಚಕ್ಪುರ ಮಂಡಲಪಾರದ ವ್ಯಾಪಾರಿ 70 ವರ್ಷದ ಶ್ಯಾಮಲ್ ಕುಮಾರ್ ಸಹಾ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಇದು ಎಸ್‌ಐಆರ್ ಭೀತಿಯಿಂದ ಇತ್ತೀಚೆಗೆ ಸಂಭವಿಸಿದ ಸಾವು.

ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಆಸ್ತಿ ದಾಖಲೆಗಳು ಸೇರಿದಂತೆ ಎಲ್ಲಾ ಮಾನ್ಯ ದಾಖಲೆಗಳನ್ನು ಹೊಂದಿದ್ದರೂ ಕುಮಾರ್ ಆತಂಕಕ್ಕೊಳಗಾಗಿದ್ದರು ಹಾಗೂ ಭಯಭೀತರಾಗಿದ್ದರು ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

‘‘2002ರ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದೆ ಎಂದು ತಿಳಿದ ಬಳಿಕ ಅವರು ಆಹಾರ ಸೇವಿಸುವುದನ್ನು ನಿಲ್ಲಿಸಿದ್ದರು ಎಂದು ಕುಮಾರ್ ಅವರ ಕುಟುಂಬದ ಸದಸ್ಯರು ಪ್ರತಿಪಾದಿಸಿದ್ದಾರೆ. ಅವರಲ್ಲಿ ಎಲ್ಲಾ ಮಾನ್ಯ ದಾಖಲೆಗಳು ಇದ್ದುವು ಎಂದು ಅವರು ತಿಳಿಸಿದ್ದಾರೆ’’ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಐಆರ್ ಎಣಿಕೆ ನಮೂನೆ ಸಿಗದ ಬಳಿಕ 27 ವರ್ಷದ ಮಹಿಳೆಯೋರ್ವರು ತನ್ನ ಅಪ್ರಾಪ್ತ ಮಗಳೊಂದಿಗೆ ರವಿವಾರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಪ್ರಸ್ತುತ ಚಿಂತಾಜನಕ ಸ್ಥಿತಿಯಲ್ಲಿರುವ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ಪುತ್ರಿ ಎಸ್‌ಎಸ್‌ಕೆಎಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಬೂತ್ ಮಟ್ಟದ ಅಧಿಕಾರಿಗಳು ಎಸ್‌ಐಆರ್ ಪರಿಶೀಲನೆಗೆ ಮನೆ ಮನೆಗೆ ತೆರಳಲು ಆರಂಭಿಸಿದ ದಿನಗಳ ಬಳಿಕ ನವೆಂಬರ್ 6ರಂದು 52 ವರ್ಷದ ತಾರಕ್ ಶಾಹ ಮುರ್ಶಿದಾಬಾದ್‌ ನಲ್ಲಿರುವ ತನ್ನ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದುಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಹೌರಹ್‌ ನ ಉಲುಬೆರಿಯದ ದಿನಗೂಲಿ ಕಾರ್ಮಿಕ 30 ವರ್ಷದ ಜಾಹಿರ್ ಮಾಲ್‌ ನ ಮೃತದೇಹ ನವೆಂಬರ್ 3ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರು ಎಸ್‌ಐಆರ್ ಬಗ್ಗೆ ತೀವ್ರ ಚಿಂತಿತರಾಗಿದ್ದರು. 2002ರ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣೆಯಾಗಿರುವುದರಿಂದ ಭೀತಿಗೊಂಡಿದ್ದರು ಎಂದು ಅವರ ಕುಟುಂಬ ಹೇಳಿದೆ.

ಹೂಗ್ಲಿಯ ದಂಕುನಿಯ 60 ವರ್ಷದ ಹಸಿನಾ ಬೇಗಂ ಎಸ್‌ಐಆರ್ ಸಭೆಯಲ್ಲಿ ಭಾಗವಹಿಸಿದ ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದರು. ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾದ ಹಿನ್ನೆಲೆಯಲ್ಲಿ ಅವರು ಚಿಂತಿತರಾಗಿದ್ದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಪೂರ್ವ ಮಿಡ್ನಾಪುರದ ಎಗ್ರಾದಲ್ಲಿ ಎಸ್‌ಐಆರ್‌ಗೆ ದಾಖಲೆಗಳನ್ನು ಪರಿಶೀಲಿಸುತ್ತಿರುವ ಸಂದರ್ಭ ಶೇಖ್ ಸಿರಾಜುದ್ದೀನ್ ಎಂಬವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

32 ವರ್ಷದ ಗೃಹಿಣಿ ಕಾಕೋಲಿ ಸರ್ಕಾರ್ ಎಂಬವರು ಟಿಟಾಗಢದಲ್ಲಿರುವ ತನ್ನ ನಿವಾಸದಲ್ಲಿ ಅಕ್ಟೋಬರ್ 31ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಕೋಲಿ ಮೂಲತಃ ಡಾಕಾದವರು. ಅವರು 2010ರಿಂದ ಭಾರತದಲ್ಲಿ ವಾಸಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News