×
Ad

ಬಿಹಾರದಿಂದಲೇ ‘ಮತಗಳ್ಳತನ’ ವಿರುದ್ಧ ನೇರ ಹೋರಾಟ: ರಾಹುಲ್ ಗಾಂಧಿ ಘೋಷಣೆ

Update: 2025-08-14 13:44 IST

ರಾಹುಲ್ ಗಾಂಧಿ (Photo: PTI)

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಹಾರದಲ್ಲಿ ಆಗಸ್ಟ್ 17ರಿಂದ ಆರಂಭಗೊಳ್ಳುವ ‘ಮತದಾರ ಅಧಿಕಾರ ಯಾತ್ರೆ’ ಮೂಲಕ ದೇಶವ್ಯಾಪಿ “ಮತದಾನ ಕಳ್ಳತನ” ವಿರುದ್ಧ ನೇರ ಹೋರಾಟಕ್ಕೆ ಇಳಿಯುತ್ತಿರುವುದಾಗಿ ಗುರುವಾರ ಘೋಷಿಸಿದರು.

“ಇದು ಕೇವಲ ಚುನಾವಣೆಯ ವಿಷಯವಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ‘ಒಬ್ಬ ವ್ಯಕ್ತಿ – ಒಂದು ಮತ’ ತತ್ವವನ್ನು ರಕ್ಷಿಸಲು ನಡೆಯುತ್ತಿರುವ ನಿರ್ಣಾಯಕ ಹೋರಾಟ” ಎಂದು ರಾಹುಲ್ ಗಾಂಧಿ ಅವರು ಎಕ್ಸ್ ನಲ್ಲಿನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ದೇಶಾದ್ಯಂತ ಮತದಾರರ ಪಟ್ಟಿಯಲ್ಲಿನ ಶುದ್ಧೀಕರಣವೇ ಈ ಅಭಿಯಾನದ ಪ್ರಮುಖ ಗುರಿ. ಯುವಕರು, ಕಾರ್ಮಿಕರು, ರೈತರು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರೀಕನು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ರಾಹುಲ್ ಗಾಂಧಿ ಅವರು ಕರೆ ನೀಡಿದ್ದಾರೆ.

ಬಿಹಾರದ ಮಣ್ಣಿನಿಂದ ಪ್ರಾರಂಭವಾಗುವ ಈ ಯಾತ್ರೆ ಸೆಪ್ಟೆಂಬರ್ 1ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯುವ ಮಹಾ ರ‍್ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ. “ಈ ಬಾರಿ, ಮತ ಕಳ್ಳರ ಸೋಲು – ಜನರ ಮತ್ತು ಸಂವಿಧಾನದ ಗೆಲುವು” ಎಂದು ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಮತದಾನ ಹಕ್ಕು ಕಸಿಯುತ್ತಿರುವ ಸಂವಿಧಾನ ವಿರೋಧಿ ನಡೆಯ ವಿರುದ್ಧ ಇಂಡಿಯಾ ಮೈತ್ರಿಕೂಟದ ನಾಯಕರು ರಾಜ್ಯಾದ್ಯಂತ ‘ಮತದಾರ ಅಧಿಕಾರ ಯಾತ್ರೆ’ಯಲ್ಲಿ ಪಾಲ್ಗೊಳ್ಳಲಿದ್ದಾರೆ ಇಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಉಸ್ತುವಾರಿ ಮತ್ತು ಪಕ್ಷದ ಸಂಘಟನೆಗಳ ಸಭೆಯ ನಂತರ, ಮೂರು ಹಂತಗಳ ವಿಶೇಷ ಅಭಿಯಾನವನ್ನು ಘೋಷಿಸಲಾಗಿದೆ. ಅದರಂತೆ ಆಗಸ್ಟ್ 14ರಂದು ಎಲ್ಲಾ ಜಿಲ್ಲೆಗಳಲ್ಲಿ ‘ಲೋಕತಂತ್ರ ಬಚಾವೋ ಮಶಾಲ್ ಮೆರವಣಿಗೆ’ ನಡೆಯಲಿದೆ. ಆಗಸ್ಟ್ 22 ರಿಂದ ಸೆಪ್ಟೆಂಬರ್ 7ರವರೆಗೆ ರಾಜ್ಯ ಕೇಂದ್ರ ಕಚೇರಿಗಳಲ್ಲಿ “ವೋಟ್ ಚೋರ್, ಗಡ್ಡಿ ಚೋರ್” ರ‍್ಯಾಲಿಗಳು ನಡೆಯಲಿದೆ.ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15ರವರೆಗೆ ಮತದಾನ ಹಕ್ಕು ರಕ್ಷಣೆಗೆ ದೇಶವ್ಯಾಪಿ ಸಹಿ ಅಭಿಯಾನ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಎನ್ ಎಸ್ ಯು ಐ ಉಸ್ತುವಾರಿ ಕನಯ್ಯಾ ಕುಮಾರ್ ವಿವರಿಸಿದರು.

ಕಳೆದ ವಾರ, ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯ ವೇಳೆ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು.

ಪ್ರಸ್ತುತ, ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳು ಈ ವಿಷಯದ ಮೇಲೆ ಚರ್ಚೆ ನಡೆಸುವಂತೆ ಒತ್ತಾಯಿಸುತ್ತಿದ್ದು, ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು ಮತದಾರರ ಹಕ್ಕು ಕಸಿಯುತ್ತಿವೆ ಎಂದು ಆರೋಪಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News