×
Ad

ಇಬ್ಬರು ಬಿಜೆಪಿ ನಾಯಕರ ಮೇಲೆ ಹಲ್ಲೆ : ಪಶ್ಚಿಮ ಬಂಗಾಳ ಸರಕಾರವನ್ನು ಟೀಕಿಸಿದ ಪ್ರಧಾನಿ ಮೋದಿ

ನೈಸರ್ಗಿಕ ವಿಕೋಪವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಪ್ರಧಾನಿ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ

Update: 2025-10-07 17:01 IST

 ನರೇಂದ್ರ ಮೋದಿ , ಮಮತಾ ಬ್ಯಾನರ್ಜಿ | Photo Credit : PTI

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ನಾಯಕರ ಮೇಲಿನ ಹಲ್ಲೆ ಘಟನೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಉತ್ತರ ಬಂಗಾಳದಾದ್ಯಂತ ಸುರಿದಿರುವ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಹಾಗೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಘಟನೆಯಲ್ಲಿ 30 ಜನರು ಮೃತಪಟ್ಟು, ಹಲವರು ನಾಪತ್ತೆಯಾಗಿದ್ದಾರೆ. ಈ ನಡುವೆ, ಸೋಮವಾರ ಜಲಪೈಗುರಿ ಜಿಲ್ಲೆಯ ನಾಗರಾಕಾಟಾದ ದೋರ್ಸ್ ಪ್ರದೇಶಕ್ಕೆ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲು ಭೇಟಿ ನೀಡಿದ್ದ ಬಿಜೆಪಿ ಸಂಸದ ಖಗೇನ್ ಮುರ್ಮು ಹಾಗೂ ಶಾಸಕ ಶಂಕರ್ ಘೋಷ್ ಮೇಲೆ ಸ್ಥಳೀಯರ ಗುಂಪೊಂದು ತೀವ್ರ ಹಲ್ಲೆ ನಡೆಸಿತ್ತು.

ಈ ಘಟನೆ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, "ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರ ವಿಫಲವಾಗಿದೆ" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ, "ಬಿಜೆಪಿ ನಾಯಕರು ನೈಸರ್ಗಿಕ ವಿಕೋಪವನ್ನು ರಾಜಕೀಯಗೊಳಿಸುತ್ತಿದ್ದಾರೆ" ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ತಿರುಗೇಟು ನೀಡಿದೆ.

"ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ಸೇವೆ ಸಲ್ಲಿಸಲು ತೆರಳಿದ್ದ ನಮ್ಮ ಪಕ್ಷದ ಸಂಸದರು ಹಾಗೂ ಶಾಸಕರ ಮೇಲೆ ಹಲ್ಲೆ ನಡೆದಿರುವುದು ಆಘಾತಕಾರಿ. ಇಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಪೂರ್ಣ ಸಂವೇದನಾಶೂನ್ಯತೆ ಹಾಗೂ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆಗೆ ಕನ್ನಡಿ" ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

"ಸೂಕ್ತ ತನಿಖಾ ವರದಿ ಬರುವವರೆಗೂ ಕಾಯದೆ, ಪ್ರಧಾನಿಗಳು ನೈಸರ್ಗಿಕ ವಿಕೋಪವನ್ನು ರಾಜಕೀಯಗೊಳಿಸಲು ಮುಂದಾಗಿರುವುದು ದುರದೃಷ್ಟಕರ. ಮೋದಿಯವರು ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಟಿಎಂಸಿ ಹಾಗೂ ಪಶ್ಚಿಮ ಬಂಗಾಳ ಸರಕಾರದ ಮೇಲೆ ನೇರ ಆರೋಪ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆಯೇ ಹೊರತು, ರಾಜಕೀಯ ವೇದಿಕೆಯಿಂದ ಮಾಡುವ ಟ್ವೀಟ್‌ನಿಂದಲ್ಲ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಹಲ್ಲೆಗೊಳಗಾದ ಶಾಸಕ ಶಂಕರ್ ಘೋಷ್ ಹಂಚಿಕೊಂಡಿರುವ ವಿಡಿಯೊದಲ್ಲಿ ಸಂಸದ ಖಗೇನ್ ಮುರ್ಮು ಅವರ ಮೂಗಿನಿಂದ ರಕ್ತ ಸುರಿಯುತ್ತಿರುವುದು ಕಂಡು ಬಂದಿತ್ತು. "ಟಿಎಂಸಿ ಬೆಂಬಲಿತ ಸ್ಥಳೀಯರು ನಮ್ಮನ್ನು ಕಾಲಿನಿಂದ ಒದ್ದು, ಕಲ್ಲು ತೂರಾಟ ನಡೆಸಿದರು" ಎಂದು ಅವರು ಆರೋಪಿಸಿದ್ದರು.

ಈ ಘಟನೆ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News