×
Ad

“ಮಾಜಿ ಉಪ ರಾಷ್ಟ್ರಪತಿ ಧನ್ಕರ್ ಎಲ್ಲಿದ್ದಾರೆ? ಹೇಬಿಯಸ್ ಕಾರ್ಪಸ್ ಸಲ್ಲಿಸಬೇಕೇ?”: ವ್ಯಂಗ್ಯವಾಡಿದ ಕಪಿಲ್ ಸಿಬಲ್

Update: 2025-08-10 12:56 IST

PC: X.com/ GirijaShetkar/MrDemocratic 

ಹೊಸದಿಲ್ಲಿ, ಆ.10: ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ಹಠಾತ್ ರಾಜೀನಾಮೆಯ ನಂತರ ಸಾರ್ವಜನಿಕ ಬದುಕಿನಿಂದ ಸಂಪೂರ್ಣವಾಗಿ ಕಾಣೆಯಾಗಿರುವುದು ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದೆ.

ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ಶನಿವಾರ, ಈ ವಿಷಯವನ್ನು ಉಲ್ಲೇಖಿಸಿ ತೀವ್ರ ಕಳವಳ ವ್ಯಕ್ತಪಡಿಸಿದರು. “ಅವರು ಎಲ್ಲಿದ್ದಾರೆ? ಸುರಕ್ಷಿತರಾಗಿದ್ದಾರೆಯೇ? ಏಕೆ ಸಂಪರ್ಕದಲ್ಲಿಲ್ಲ? ನಾವು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಬೇಕೇ?” ಎಂದು ಸಿಬಲ್ ವ್ಯಂಗ್ಯವಾಡಿದ್ದಾರೆ.

ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರ ಪ್ರಕಾರ, ಧನ್ಕರ್ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಅನೇಕ ರಾಜಕೀಯ ನಾಯಕರೂ ಇದೇ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಪಶ್ಚಿಮ ಬಂಗಾಳದ ರಾಜ್ಯಪಾಲ ಹಾಗೂ ಉಪ ರಾಷ್ಟ್ರಪತಿ ಹುದ್ದೆಗಳಲ್ಲಿ ಸದಾ ಚುರುಕಾಗಿ, ನಿರಂತರವಾಗಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಧನ್ಕರ್, ಜುಲೈ 21ರಂದು ರಾಜೀನಾಮೆ ನೀಡಿದ ನಂತರ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದೇ, ಸಾಮಾಜಿಕ ಮಾಧ್ಯಮದಲ್ಲೂ ಮೌನವಾಗಿದ್ದಾರೆ. “ಅವರು ತಮ್ಮ ಅಧಿಕಾರಾವಧಿಯಲ್ಲಿ ಸರ್ಕಾರವನ್ನು ಬೆಂಬಲಿಸಿದ್ದರು, ಆದರೆ ಇಂದು ಅವರನ್ನು ರಕ್ಷಿಸುವ ಜವಾಬ್ದಾರಿ ವಿರೋಧ ಪಕ್ಷಗಳ ಮೇಲಿದೆ” ಎಂದು ಸಿಬಲ್ ಕಳವಳ ವ್ಯಕ್ತಪಡಿಸಿದ್ದಾರೆ.

‘ಲಾಪತಾ ಲೇಡೀಸ್’ ಚಿತ್ರದ ಕುರಿತು ಕೇಳಿದ್ದವು, ಆದರೆ “ಲಾಪತಾ ವೈಸ್ ಪ್ರೆಸಿಡೆಂಟ್' ಬಗ್ಗೆ ಕೇಳಿರಲಿಲ್ಲ ಎಂದು ಕಪಿಲ್ ಸಿಬಲ್ ಹೇಳಿದರು. “ಧನ್ಕರ್ ಎಲ್ಲಿದ್ದಾರೆ ಎಂಬುದರ ಕುರಿತು ಗೃಹ ಸಚಿವ ಅಮಿತ್ ಶಾ ತಕ್ಷಣ ಸ್ಪಷ್ಟನೆ ನೀಡಬೇಕು. ಅವರ ಕುಟುಂಬವೂ ಮೌನವಾಗಿರುವುದು ಪ್ರಶ್ನಾರ್ಹ” ಎಂದು ಹೇಳಿದರು.

ಇದರ ನಡುವೆ, ಮೂಲಗಳ ಪ್ರಕಾರ, ಧನ್ಕರ್ ಅವರಿಗೆ ನೀಡಬೇಕಿರುವ ಹೊಸ ಸರ್ಕಾರಿ ವಸತಿ ಕುರಿತು ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಅವರ ಉತ್ತರಾಧಿಕಾರಿಗೆ ಉಪ ರಾಷ್ಟ್ರಪತಿ ಎನ್ಕ್ಲೇವ್ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದ್ದು, ವಸತಿ ಸಚಿವಾಲಯಕ್ಕೂ ಈ ಕುರಿತು ಸರ್ಕಾರದಿಂದ ಅಧಿಕೃತ ಸೂಚನೆ ಬಂದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News