ನಿದ್ದೆಯಲ್ಲಿದ್ದ ಪತಿಯ ಮೇಲೆ ಕುದಿಯುವ ಎಣ್ಣೆ ಸುರಿದು ಗಾಯಕ್ಕೆ ಮೆಣಸಿನ ಪುಡಿ ಎರಚಿದ ಪತ್ನಿ!
ಹೊಸದಿಲ್ಲಿ: ನಿದ್ದೆಯಲ್ಲಿದ್ದ ಪತಿಯ ಮೇಲೆ ಸ್ವತಃ ಪತ್ನಿಯೇ ಕುದಿಯುವ ಎಣ್ಣೆ ಸುರಿದು, ಗಾಯಕ್ಕೆ ಮೆಣಸಿನ ಪುಡಿ ಎರಚಿದ ಪೈಶಾಚಿಕ ಘಟನೆ ದಕ್ಷಿಣ ದೆಹಲಿಯ ಮದಂಗೀರ್ ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ತೀವ್ರ ಸುಟ್ಟಗಾಯಗಳಾಗಿರುವ 28 ವರ್ಷದ ಪತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಧೀರ್ಘಕಾಲದಿಂದ ಇದ್ದ ಕೌಟುಂಬಿಕ ವ್ಯಾಜ್ಯದ ಕಾರಣದಿಂದ ಪತ್ನಿ ಈ ಕೃತ್ಯ ಎಸಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ವ್ಯಕ್ತಿಯ ದೇಹವಿಡೀ ಸುಟ್ಟಗಾಯಗಳಾಗಿವೆ.
ಫಾರ್ಮಸ್ಯೂಟಿಕಲ್ ಕಂಪನಿಯ ಉದ್ಯೋಗಿಯಾಗಿದ್ದ ದಿನೇಶ್ ಕುಮಾರ್ ಅವರನ್ನು ಮೊದಲು ಮದನ್ ಮೋಹನ್ ಮಾಳವೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ವರ್ಷದ ಮಗಳ ಜತೆ ಮಲಗಿದ್ದಾಗ ನಸುಕಿನ ವೇಳೆ 3.15ರ ಸುಮಾರಿಗೆ ಪತ್ನಿ ಸಾಧನಾ ಈ ಕೃತ್ಯ ಎಸಗಿದ್ದಾಗಿ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಗಾಯದ ಉರಿಯಿಂದಾಗಿ ಎಚ್ಚರಗೊಂಡು ನೋಡಿದಾಗ ಪತ್ನಿ ಕುದಿಯುವ ಎಣ್ಣೆ ಹಿಡಿದಿದ್ದಳು ಎಂದು ಕುಮಾರ್ ವಿವರಿಸಿದ್ದಾಗಿ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ. ಬಳಿಕ ಗಾಯದ ಮೇಲೆ ಮೆಣಸಿನ ಪುಡಿ ಎರಚಿ, ಕೂಗಿಕೊಂಡರೆ ಮತ್ತಷ್ಟು ಮೆಣಸಿನ ಪುಡಿ ಎರಚುವುದಾಗಿ ಬೆದರಿಕೆ ಹಾಕಿದಳು ಎನ್ನಲಾಗಿದೆ.
ಚೀರಾಟವನ್ನು ಕೇಳಿ ಅಕ್ಕಪಕ್ಕದವರು ಧಾವಿಸಿ, ಭಾವ ರಾಮಸಾಗರ್ ಎಂಬಾತನಿಗೆ ಮಾಹಿತಿ ನೀಡಿದ್ದು, ಅವರು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಿಂದ ಬಂದ ಮಾಹಿತಿಯನ್ನು ಆಧರಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕುಮಾರ್ ಹೇಳಿಕೆ ಆಧರಿಸಿ ಅಂಬೇಡ್ಕರ್ ನಗರ ಠಾಣೆಯಲ್ಲಿ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ.
ಮೂಲತಃ ಉತ್ತರಪ್ರದೇಶದ ರಾಯಬರೇಲಿಯವರಾದ ಈ ದಂಪತಿ ಮದಂಗೀರ್ ನಲ್ಲಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದರು. ಪದೇ ಪದೇ ಜಗಳವಾಡುತ್ತಿದ್ದರು. ಎರಡು ವರ್ಷದ ಹಿಂದೆ ಮಹಿಳೆ ತನ್ನ ಪತಿಯ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದನ್ನು ರಾಜಿಯಲ್ಲಿ ಇತ್ಯರ್ಥಪಡಿಸಲಾಗಿದ್ದು, ಕೆಲ ವಾರಗಳ ಹಿಂದೆ ಮತ್ತೊಂದು ದೂರು ನೀಡಿದ್ದಳು.