ಪುಣೆ ವಿವಿ ಕ್ಯಾಂಟೀನ್ ಆಹಾರದಲ್ಲಿ ಹುಳ ಪತ್ತೆ; ಕ್ರಮಕ್ಕೆ ವಿದ್ಯಾರ್ಥಿಗಳ ಆಗ್ರಹ
PC: PTI screengrab/x.com/Pune_First
ಪುಣೆ: ಸವಿತ್ರಿಭಾಯಿ ಫುಲೆ ವಿಶ್ವವಿದ್ಯಾನಿಲಯದ ಕ್ಯಾಂಟೀನ್ ಆಹಾರದಲ್ಲಿ ಹುಳ ಪತ್ತೆಯಾಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸ್ವಚ್ಛತೆ ಮತ್ತ ಆಹಾರ ಸುರಕ್ಷತೆಗೆ ಅಪಾಯ ಒಡ್ಡುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಜಿರಲೆ, ಗಾಜಿನ ಚೂರು ಮತ್ತು ರಬ್ಬರ್ ತುಂಡುಗಳು ಕೂಡಾ ಊಟದಲ್ಲಿ ಪತ್ತೆಯಾಗಿತ್ತು. ಈ ಭೋಜನಶಾಲೆ ವಿಶ್ವವಿದ್ಯಾನಿಲಯದ ಮುಖ್ಯ ಕ್ಯಾಂಟೀನ್ ಗಳಲ್ಲೊಂದಾಗಿದ್ದು, ಕೈಗೆಟುಕುವ ದರದಲ್ಲಿ ಊಟ ನೀಡುತ್ತಿತ್ತು. ಸಮಾನಶಾಸ್ತ್ರ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗಗಳ ಪಕ್ಕ ಇದು ಕಾರ್ಯ ನಿರ್ವಹಿಸುತ್ತಿತ್ತು.
ಇತ್ತೀಚಿನ ಘಟನೆ ಬಳಿಕ ವಿದ್ಯಾರ್ಥಿಗಳು ಮೆಸ್ ನಿರ್ವಾಹಕರು ಮತ್ತು ವಿಶ್ವವಿದ್ಯಾನಿಲಯದ ಆಡಳಿತ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದರು ಹಾಗೂ ಇಂಥ ಘಟನೆಗಳು ಮರುಕಳಿಸದಂತೆ ಕೀಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಘಟನೆ ಹಿನ್ನೆಲೆಯಲ್ಲಿ ಕ್ಯಾಂಟೀನ್ ನಿರ್ವಾಹಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಲಿಖಿತ ಪತ್ರವನ್ನು ಪಿಂಪ್ರಿ-ಚಿಂಚವಾಡ ಆರ್ಪಿಐ (ಅಟಾವಳೆ ಗುಂಪು) ನಗರ ಘಟಕದ ಯುವ ಅಧ್ಯಕ್ಷ ಧರ್ಮಾಂತ ಗಾಯಕ್ವಾಡ್ ಅವರು ಕುಲಪತಿ ಡಾ.ಸುರೇಶ್ ಗೋಸಾವಿ ಅವರಿಗೆ ಸಲ್ಲಿಸಿದ್ದಾರೆ ಎಂದು ಡೆಮೊಕಾರ್ಟ್ ವರದಿ ಮಾಡಿದೆ.
ಕ್ರಮ ಕೈಗೊಳ್ಳುವ ಭರವಸೆಯನ್ನು ವಿವಿ ಆಡಳಿತ ನೀಡಿದೆ ಎನ್ನಲಾಗಿದ್ದು, ಸ್ವಚ್ಛತೆ ಕಾಪಾಡುವುದು, ಹಾಸ್ಟೆಲ್ ಮೂಲಸೌಕರ್ಯ ದುರಸ್ತಿ ಮತ್ತು ಕೀಟನಾಶಕ ಸಿಂಪಡಣೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ವಚ್ಛತೆ ಕೊರತೆಯಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
Pune: Worms Found Again In SPPU Refectory Food, Students Slam Admin Over Repeated Hygiene Lapses pic.twitter.com/NDBe5sUuPS
— Pune First (@Pune_First) July 23, 2025