ಅಸಹಿಷ್ಣುತೆಯ ಗಾಯ: ಮುಚ್ಚಿಟ್ಟರೆ ಅಪಾಯ

Update: 2015-11-26 10:18 GMT

ಈ ದೇಶದೊಳಗಿನ ಅಸಹಿಷ್ಣುತೆ ಹೇಗೆ ತನ್ನ ಮನೆಯೊಳಗೂ ಆತಂಕವನ್ನು ಬಿತ್ತಿದೆ ಎನ್ನುವುದಕ್ಕೆ ನಟ ಆಮಿರ್ ಖಾನ್ ಒಂದು ಉದಾಹರಣೆಯನ್ನು ಹೇಳಿದ್ದರು. ದೇಶದೊಳಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ ಪತ್ನಿ, ಒಂದು ದಿನ ಮಾತಿನ ನಡುವೆ ‘ನಾವು ಬೇರೆ ದೇಶಕ್ಕೆ ಹೋಗಬೇಕಾ’ ಎಂಬ ಪ್ರಶ್ನೆಯನ್ನು ಕೇಳಿದ್ದಳು ಎಂದು ಆಮಿರ್ ಖಾನ್ ಹಂಚಿಕೊಂಡಿದ್ದರು.

ಇಲ್ಲಿ ಆಮಿರ್ ಖಾನ್ ಅವರಿಗೆ ದೇಶದ ಬೆಳವಣಿಗೆಗಳ ಕುರಿತಂತೆ ಬೊಟ್ಟು ಮಾಡುವ ಉದ್ದೇಶವಿತ್ತೇ ಹೊರತು ಅವರೆಂದೂ ದೇಶ ಬಿಡುವ ಮಾತನ್ನಾಡಿರಲಿಲ್ಲ. ಆದರೆ ‘ಅನಂತಮೂರ್ತಿಯವರ ವಿರುದ್ಧ’ ಅಸಹಿಷ್ಣುಗಳು ಯಾವ ತಂತ್ರವನ್ನು ಬಳಸಿದ್ದರೋ ಅದನ್ನೇ ಇದೀಗ ಆಮಿರ್ ಖಾನ್ ವಿರುದ್ಧವೂ ಬಳಸುತ್ತಿದ್ದಾರೆ. ಆಮಿರ್ ಖಾನ್ ಆಡಿದ ಮಾತಿನ ಧ್ವನಿಯನ್ನು ತಮಗೆ ಬೇಕಾದ ಹಾಗೆ ತಿರುಚಿ, ‘ಆಮಿರ್ ದೇಶ ಬಿಟ್ಟು ಹೋಗುವ ಮಾತನ್ನಾಡಿದ್ದಾರೆ’ ಎಂದು ಹುಯಿಲೆಬ್ಬಿಸಿದ್ದಾರೆ. ಮತ್ತು ಹಲವರು ಆ ಮೂಲಕ ಅವರ ದೇಶಪ್ರೇಮವನ್ನು ಪ್ರಶ್ನಿಸಿದ್ದಾರೆ. ಕೆಲವರು ದೇಶ ಬಿಟ್ಟು ತೊಲಗು ಎಂದು ಕರೆ ನೀಡಿದ್ದಾರೆ. ಆಮಿರ್ ಖಾನ್ ಮನೆ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದಾರೆ. ‘ನಮ್ಮ ಮುಖ ವಿಕಾರವಾಗಿದೆ’ ಎಂದು ತೋರಿಸಿದ ಕನ್ನಡಿಯನ್ನೇ ನಾವು ಒಡೆದು ಹಾಕಲು ಹೊರಟಿದ್ದೇವೆ. ನಮ್ಮ ಮುಖವನ್ನು ಸರಿಪಡಿಸಿಕೊಳ್ಳುವ ಗೋಜಿಗೆ ನಾವು ಹೋಗುತ್ತಿಲ್ಲ. ಬಹುಶಃ ದೇಶದಲ್ಲಿ ಅಸಹಿಷ್ಣುತೆ ಯಾವ ರೀತಿ ತಾಂಡವವಾಡುತ್ತಿದೆ ಎನ್ನುವುದಕ್ಕೆ ಆಮಿರ್ ಖಾನ್ ಹೇಳಿಕೆಗೆ ವ್ಯಕ್ತವಾದ ಅತ್ಯಂತ ಕ್ರೂರ ಪ್ರತಿಕ್ರಿಯೆಯೇ ಸಾಕ್ಷಿ.

ಇಲ್ಲಿ ಅಸಹಿಷ್ಣುತೆ ಇದ್ದಿರಬಹುದು, ಆದರೆ ಅದನ್ನು ನೀವು ಬಹಿರಂಗವಾಗಿ ಆಡಿ ದೇಶಕ್ಕೆ ಅವಮಾನ ಮಾಡಬಾರದು, ವಿದೇಶಿಯರ ಮುಂದೆ ಭಾರತದ ವರ್ಚಸ್ಸನ್ನು ಕುಂದಿಸಬಾರದು ಎನ್ನುವ ಸರ್ವಾಧಿಕಾರಿ ಮನೋಭಾವವೊಂದು ದೇಶದಲ್ಲಿ ವಿಜೃಂಭಿಸುತ್ತಿದೆ. ಈ ದೇಶದ ಮಧ್ಯಮ ವರ್ಗದ ಜನರೂ ತಿಳಿದೋ ತಿಳಿಯದೆಯೋ ಅದಕ್ಕೆ ತಲೆದೂಗುತ್ತಿದ್ದಾರೆ. ಒಂದು ಗಾಯವನ್ನು ಮುಚ್ಚಿಟ್ಟರೆ ಅದು ಯಾರಿಗೂ ಗೊತ್ತಾಗುವುದಿಲ್ಲ ಎನ್ನುವ ಯೋಚನೆಯೇ ಅಪಾಯಕಾರಿ. ಅದನ್ನು ಬಹಿರಂಗಪಡಿಸಿ, ಸೂಕ್ತ ವೈದ್ಯರಿಗೆ ತೋರಿಸಿ ಆರಂಭದಲ್ಲೇ ಗುಣಪಡಿಸುವುದು ಬುದ್ಧಿವಂತಿಕೆ. ವರ್ಚಸ್ಸಿಗೆ ಧಕ್ಕೆಯಾಗುತ್ತದೆಯೆಂದು ಗಾಯವನ್ನು ಮುಚ್ಚಿಟ್ಟರೆ ಅದು ಕೊಳೆತು, ಇನ್ನಷ್ಟು ಭೀಕರವಾಗಿ ಕೊನೆಗೆ ಪ್ರಾಣಕ್ಕೆ ಕುತ್ತಾಗಬಹುದು. ಅದಕ್ಕೆ ಒಂದು ಉದಾಹರಣೆಯಾಗಿ ಗುಜರಾತ್ ನಮ್ಮ ಮುಂದಿದೆ.

ಗುಜರಾತ್‌ನಲ್ಲಿ ಅಸಹನೆ ಬೆಳೆಯುತ್ತಿದ್ದ ಹಾಗೆಯೇ ಅಲ್ಲಿನ ಚಿಂತಕರು, ಸಾಮಾಜಿಕ ಹೋರಾಟಗಾರರು ಅದರ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದರೆ ಗುಜರಾತ್ ಹತ್ಯಾಕಾಂಡವನ್ನೇ ತಪ್ಪಿಸಬಹುದಿತ್ತೇನೋ? ಗುಜರಾತ್ ಹತ್ಯಾಕಾಂಡ ಅಸಹನೆ ಹೇಗೆ ಹಂತ ಹಂತವಾಗಿ ಬೆಳೆದು ಒಂದು ದೊಡ್ಡ ಹತ್ಯಾಕಾಂಡವನ್ನು ಸೃಷ್ಟಿಸಬಲ್ಲುದು ಎನ್ನುವುದಕ್ಕೆ ಉದಾಹರಣೆಯಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯುತ್ತಿರುವ ಹಿಂಸೆ ಮತ್ತು ಅಸಹಿಷ್ಣುತೆಯ ವಿರುದ್ಧ ಕೇಳಿ ಬರುತ್ತಿರುವ ಧ್ವನಿ ಭವಿಷ್ಯದ ಪಾಲಿಗೆ ಆಶಾದಾಯಕ ಧ್ವನಿಯಾಗಿದೆ.

ಆಮಿರ್ ಖಾನ್ ಈ ಧ್ವನಿಗೆ ತನ್ನ ಮಾತುಗಳನ್ನು ಸೇರಿಸಿದ್ದಾರಷ್ಟೇ. ರಾಜ್ಯಪಾಲ ಸ್ಥಾನದಲ್ಲಿರುವ ಓರ್ವ ವ್ಯಕ್ತಿ ಮುಸ್ಲಿಮರಿಗೆ ಪಾಕಿಸ್ತಾನಕ್ಕೆ ತೊಲಗಿ ಎಂದು ಹೇಳಿದಾಗ ಕೇಳಿ ಬರದ ಆಕ್ಷೇಪ ಆಮಿರ್ ಅಸಹಿಷ್ಣುತೆಯ ವಿರುದ್ಧ ಕಳವಳ ವ್ಯಕ್ತಪಡಿಸಿದಾಗ ವ್ಯಕ್ತವಾಗುವುದು ಈ ದೇಶದಲ್ಲಿ ಅಸಹಿಷ್ಣುತೆ ವಿಜೃಂಭಿಸುತ್ತಿರುವುದಕ್ಕೆ ಸಾಕ್ಷಿಯಲ್ಲವೇ?


 ಈ ದೇಶದ ಅಸಹಿಷ್ಣುತೆಯ ವಿರುದ್ಧ ಧ್ವನಿಯೆತ್ತಿದವರಲ್ಲಿ ಆಮಿರ್ ಮೊದಲಿಗರೇನೂ ಅಲ್ಲ. ಈ ದೇಶ ಬಿಟ್ಟು ಹೋಗುವ ಕುರಿತಂತೆ ಮಾತನಾಡಿದವರಲ್ಲಿ ಮೊದಲಿಗರು ಶ್ರೇಷ್ಠ ನಟ ಕಮಲ್ ಹಾಸನ್. ಅವರ ವಿಶ್ವರೂಪಂ ಚಿತ್ರಕ್ಕೆ ಅಸಹನೆ ವ್ಯಕ್ತವಾದಾಗ, ಕಮಲ್ ಅವರು ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಕೇವಲ ತಮ್ಮ ಒಂದು ಚಿತ್ರದ ಕುರಿತಂತೆ ಅಸಹನೆ ವ್ಯಕ್ತವಾದಾಗ ಕಮಲ್‌ರಂತಹ ಹಿರಿಯ ನಟರು ಇಂತಹ ಹೇಳಿಕೆ ನೀಡಿದ್ದರು. ಆದರೆ ಆಗ ಕಮಲ್ ದೇಶಪ್ರೇಮದ ಬಗ್ಗೆ ಯಾರೂ ಅನುಮಾನ ವ್ಯಕ್ತಪಡಿಸಿರಲಿಲ್ಲ. ಕಮಲ್ ವಿರುದ್ಧ ಹೇಳಿಕೆಯನ್ನೂ ನೀಡಿರಲಿಲ್ಲ. ಇದೇ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಕಲಾವಿದ ಎಮ್.ಎಫ್. ಹುಸೈನ್ ದೇಶವನ್ನೇ ಬಿಡುವಂತಹ ಸನ್ನಿವೇಶ ನಿರ್ಮಾಣವಾಯಿತು. ಭಾರತವೇ ಪರೋಕ್ಷವಾಗಿ ಅವರನ್ನು ಹೊರಗಟ್ಟಿತು. ಕಟ್ಟಕಡೆಗೆ ವಿದೇಶದಲ್ಲೇ ಅವರು ಸಾಯಬೇಕಾದಂತಹ ಸ್ಥಿತಿ ನಿರ್ಮಾಣವಾಯಿತು. ಈ ಬಗ್ಗೆ ನಾವು ಖೇದ ವ್ಯಕ್ತಪಡಿಸಿದ್ದು ತೀರಾ ಕಡಿಮೆ.

ಅವರು ದೇಶ ತೊರೆಯಲು ಕಾರಣವಾದ ಅದೇ ಜನರು ಇಂದು ವಿಜೃಂಭಿಸುತ್ತಿದ್ದಾರೆ. ಇಂದು ಆಮಿರ್ ಖಾನ್ ಅವರು ಕಮಲ್ ಹಾಸನ್‌ರಂತೆ ತನ್ನ ಚಿತ್ರಕ್ಕೆ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿಲ್ಲ. ಈ ದೇಶದ ಬೆಳವಣಿಗೆಗಳ ಬಗ್ಗೆ ಅವರು ಮಾತನಾಡಿದ್ದಾರೆ. ಜನಸಾಮಾನ್ಯರು ನಿರ್ಭಯವಾಗಿ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು ಎಂಬ ಹಿನ್ನೆಲೆಯಲ್ಲಿ ಅವರು ತಮ್ಮ ಮನದಳಲನ್ನು ತೆರೆದಿಟ್ಟಿದ್ದಾರೆ. ಇಲ್ಲಿ ಅಧಿಕಾರದಲ್ಲಿ ಸಚಿವರು, ಸಂಸದರು, ರಾಜ್ಯಪಾಲರೇ ಅಸಹಿಷ್ಣುತೆಯ ಹೇಳಿಕೆಗಳನ್ನು ನೀಡುತ್ತಿರುವಾಗ ಅದರ ವಿರುದ್ಧ ಮಾತನಾಡಿದವರ ದೇಶಪ್ರೇಮವನ್ನೇ ಪ್ರಶ್ನಾರ್ಹಗೊಳಿಸುವುದು ದೇಶದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಆದುದರಿಂದ ನಾವು ಆಮಿರ್ ಖಾನ್ ವಿರುದ್ಧ ನಮ್ಮ ಬಾಣಗಳನ್ನು ಬಿಡುವ ಬದಲು, ಅವರು ಪ್ರಸ್ತಾಪಿಸಿದ ಸಮಸ್ಯೆಯ ವಿರುದ್ಧ ನಮ್ಮ ಗುರಿಯನ್ನು ಬದಲಿಸಬೇಕಾಗಿದೆ.

 ಸರ್ವಾಧಿಕಾರ ವಿಜೃಂಭಿಸುತ್ತಿರುವ ನೆಲದಲ್ಲಿ ಬುದ್ಧಿಜೀವಿಗಳು, ಕಲಾವಿದರು ಇಂತಹ ಆತಂಕಗಳನ್ನು ಎದುರಿಸುತ್ತಿರುವುದು ಇಂದು ನಿನ್ನೆಯಲ್ಲ. ಪಾಶ್ಚಾತ್ಯ ದೇಶಗಳಲ್ಲೇ ಹತ್ತು ಹಲವು ಕಲಾವಿದರು, ಚಿಂತಕರು ದೇಶಭ್ರಷ್ಟರಾಗಿಯೇ ತಮ್ಮ ಆಲೋಚನೆಗಳನ್ನು, ಚಿಂತನೆಗಳನ್ನು ಹರಡಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿತ್ತು. ನಾವಿಂದು ಸರ್ವಶ್ರೇಷ್ಠ ಚಿಂತಕರೆಂದು ಕರೆಯುವವರೆಲ್ಲ ಒಂದಲ್ಲ ಒಂದು ಕಾರಣಕ್ಕಾಗಿ ತಮ್ಮ ದೇಶವನ್ನು ತೊರೆಯಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಅಂತಹ ಸ್ಥಿತಿ ಭಾರತದಲ್ಲಿ ನಿರ್ಮಾಣವಾಗಬಾರದು ಎಂದರೆ ಬೆಳೆಯುತ್ತಿರುವ ಅಸಹನೆಯನ್ನು ನಾವು ಆರಂಭದಲ್ಲೇ ಚಿವುಟಿ ಹಾಕಬೇಕು. ಆದುದರಿಂದ, ಅದರ ವಿರುದ್ಧ ದೇಶದ ಎಲ್ಲ ಪ್ರಜ್ಞಾವಂತರು ಒಂದಾಗಿ ಮಾತನಾಡುವ ವಾತಾವರಣ ನಿರ್ಮಾಣವಾಗಬೇಕು. ಎಂ.ಎಫ್.ಹುಸೈನ್‌ರಿಗೊದಗಿದ್ದ ಗತಿ ಈ ದೇಶದಲ್ಲಿ ಇನ್ನೊಬ್ಬರಿಗೆ ಬರಲು ನಾವು ಯಾವ ಕಾರಣಕ್ಕೂ ಅವಕಾಶ ನೀಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News