ಜಗತ್ತನ್ನು ಬಿಡಿ, ದೇಶದ ಕಡೆಗೆ ಗಮನಕೊಡಿ: ಪ್ರಧಾನಿ ಮೋದಿಗೆ ಶಿವಸೇನೆ ಸಲಹೆ
ಮುಂಬೈ, ಜ.5: ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿರುವ ಶಿವಸೇನೆ ಪಾಕಿಸ್ತಾನವನ್ನು ಪ್ರಧಾನಿ ಮೋದಿ ನಂಬಬಾರದು. ಮೋದಿ ಜಗತ್ತನ್ನು ಸುತ್ತುವುದನ್ನು ಕೈ ಬಿಟ್ಟು ದೇಶದ ಕಡೆಗೆ ಗಮನ ನೀಡಲಿ ಎಂದು ಎಚ್ಚರಿಕೆ ನೀಡಿದೆ.
‘‘ದಾಳಿಯ ಹಿನ್ನೆಲೆಯಲ್ಲಿ ನಮ್ಮದೇಶದ ಗಡಿ ಸುರಕ್ಷಿತವಾಗಿಲ್ಲ ಎನ್ನುವುದು ಸಾಬೀತಾಗಿದೆ. ಆಂತರಿಕ ಭದ್ರತೆ ಕುಸಿದಿದೆ. ಹುತಾತ್ಮರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಂತಾಪ ಸೂಚಿಸುವುದಕ್ಕೆ ಮಾತ್ರ ಸೀಮಿತವಾಗಿದೆ ’’ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ವಿವರಿಸಲಾಗಿದೆ.
‘‘ ನವಾಝ್ ಶರೀಫ್ ಜೊತೆ ಒಂದು ಲೋಟ ಚಾ ಕುಡಿಯಲು ಪ್ರಧಾನಿ ಮೋದಿ ಅವರು ನವಾಝ್ ಶರೀಫ್ ಬಳಿ ತೆರಳಿದ ಪರಿಣಾಮವಾಗಿ ಭಾರತ ಏಳು ಸೈನಿಕರನ್ನು ಕಳೆದುಕೊಂಡಿತು.ಭಾರತದ ಗಡಿ ಸುರಕ್ಷಿತವಾಗಿಲ್ಲ. ಆಂತರಿಕ ಭದ್ರತೆಯು ಅಸ್ತವ್ಯಸ್ತಗೊಂಡಿದೆ. ಆರು ಉಗ್ರರನ್ನು ಬಲಿಕೊಟ್ಟು ಪಾಕಿಸ್ತಾನವು ಭಾರತದ ಸ್ವಾಭಿಮಾನವನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದೆ ’’ ಎಂದು ಹೇಳಿದೆ.
‘‘ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇರುತ್ತಿದ್ದರೆ ಸೈನಿಕರನ್ನು ಕಳೆದುಕೊಂಡಕ್ಕೆ ಪ್ರತಿಕಾರ ತೀರಿಸಲು ಪಾಕ್‌ನ ವಿರುದ್ಧ ದಾಳಿಗೆ ಒತ್ತಾಯಿಸುತ್ತಿತ್ತು. ಆದರೆ ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ ’’ ಎಂದು ಹೇಳಲಾಗಿದೆ.