×
Ad

ಆರ್ಥಿಕವಾಗಿ ಸ್ಥಿತಿವಂತರಿಗೆ ಎಲ್‌ಪಿಜಿ ಸಬ್ಸಿಡಿ ರದ್ದತಿ;ಯಾಕಿಷ್ಟು ವಿಳಂಬ?

Update: 2016-01-10 23:38 IST

10   ಲಕ್ಷ ರೂ.ಗಿಂತ ಅಧಿಕ ವಾರ್ಷಿಕ ಆದಾಯವಿರುವ ವ್ಯಕ್ತಿಗಳು, ಜನವರಿ 1ರಿಂದ ಸ್ವಯಂಘೋಷಣೆಯ ಮೂಲಕ ಎಲ್‌ಪಿಜಿ ಸಬ್ಸಿಡಿಯನ್ನು ತ್ಯಜಿಸಬೇಕೆಂದು ಕೇಂದ್ರ ಸರಕಾರವು ಘೋಷಿಸಿದೆ. ಮೇಲ್ನೋಟಕ್ಕೆ ಇದೊಂದು ಮಹತ್ವಪೂರ್ಣವಾದ ಘೋಷಣೆಯೆಂಬಂತೆ ತೋರುತ್ತದೆ. ಆದರೆ ಆರ್ಥಿಕ ಸುಧಾರಣೆಗಳ ಮಟ್ಟಿಗೆ ಹೇಳುವುದಾದರೆ, ಇದೊಂದು,ಪುಟ್ಟದಾದರೂ ತೀರಾ ವಿಳಂಬವಾಗಿ ಅನುಷ್ಠಾನಗೊಂಡ ಒಂದು ವಿಶಿಷ್ಟ ಪ್ರಕರಣವೆಂದು ಹೇಳಬಹುದು.
        ಪ್ರಸ್ತುತ, ಭಾರತದಲ್ಲಿ ಒಟ್ಟು 16.30 ಕೋಟಿ ನೋಂದಾಯಿತ ಎಲ್‌ಪಿಜಿ ಗ್ರಾಹಕರಿದ್ದು, ಅವರಲ್ಲಿ 14.70 ಕೋಟಿ ಮಂದಿ ಎಲ್‌ಪಿಜಿ ಸಬ್ಸಿಡಿಯನ್ನು ಪಡೆದುಕೊಳ್ಳುತ್ತಿದ್ದಾರೆ.ಉಳಿದ 1.60 ಕೋಟಿ ಮಂದಿಯ ಪೈಕಿ ಸುಮಾರು 10 ಲಕ್ಷ ಮಂದಿ ಬೋಗಸ್ ಅಥವಾ ಕಾಲ್ಪನಿಕ ವ್ಯಕ್ತಿಗಳಾಗಿದ್ದು, ಸರಕಾರವು ‘ಪ್ರತ್ಯಕ್ಷ್ ಹಸ್ತಾಂತರಿತ್ ಲಾಭ್’ (ಪಹಲ್) ಯೋಜನೆಯಡಿ ಎಲ್‌ಪಿಜಿ ಸಬ್ಸಿಡಿಯನ್ನು ಗ್ರಾಹಕರಿಗೆ ನೇರವಾಗಿ ಹಸ್ತಾಂತರಿಸುವ ಅಭಿಯಾನವನ್ನು ಕೈಗೊಂಡ ಬಳಿಕ ಅವರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ.. ಇನ್ನು ಸುಮಾರು 60 ಲಕ್ಷ ಮಂದಿ, ತಮ್ಮ ಸಬ್ಸಿಡಿಯ ಹಕ್ಕನ್ನು, ‘ಗಿವ್ ಇಟ್ ಅಪ್’ ಅಭಿಯಾನದಡಿ ಸ್ವಯಂಪ್ರೇರಿತವಾಗಿ ಹಿಂದಿರುಗಿಸಿದ್ದಾರೆ.
  ಭಾರತದಲ್ಲಿರುವ ಒಟ್ಟು 3.25 ಕೋಟಿ ತೆರಿಗೆ ಪಾವತಿದಾರರಲ್ಲಿ 10 ಲಕ್ಷ ರೂ.ಗಿಂತ ಅಧಿಕ ಮಾಸಿಕ ವರಮಾನವಿರುವವರು ಶೇ. 5.5 ಮಾತ್ರವೇ ಇದ್ದಾರೆ. ಅಂದರೆ 20 ಲಕ್ಷಕ್ಕೂ ಕಡಿಮೆ ಎಂದಾಯಿತು.ಎಲ್‌ಪಿಜಿ ಸಬ್ಸಿಡಿ ಲಭ್ಯವಿರುವವರಲ್ಲಿ ಅವರ ಸಂಖ್ಯೆ ಶೇ.1.3ರಷ್ಟಾಗಿದೆ. ಆದರೆ ಅವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಎಲ್‌ಪಿಜಿ ಸಬ್ಸಿಡಿಯನ್ನು ತೊರೆಯಬೇಕೆಂದು ನಿರೀಕ್ಷಿಸುವುದು ಒಂದು ಉತ್ತಮ ಚಿಂತನೆಯಾಗಿದೆ. ಆದಾಗ್ಯೂ, ಈ 20 ಲಕ್ಷ ಮಂದಿಯನ್ನು ಹೊರತುಪಡಿಸಿದರೆ, ಸುಮಾರು 14.50 ಕೋಟಿ ಮಂದಿ ಈಗಲೂ ಸಬ್ಸಿಡಿಯನ್ನು ಪಡೆಯುತ್ತಿದ್ದಾರೆ.
         ಹತ್ತಿರ ಹತ್ತಿರ ಎರಡು ದಶಕಗಳಿಂದ ಹಿಂದಿನ ಸರಕಾರಗಳು, ಎಲ್‌ಪಿಜಿ ಸಬ್ಸಿಡಿಯನ್ನು ರದ್ದುಪಡಿಸುವ ಬಗ್ಗೆ ಬಹಳಷ್ಟು ಮಾತನಾಡುತ್ತಲೇ ಬಂದಿದ್ದವು. ಆದರೆ ಯಾರೂ ಕೂಡಾ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗಲಿಲ್ಲ.1997ರಲ್ಲಿ ಆಗಿನ ಸಂಯುಕ್ತರಂಗ ಸರಕಾರವು, ತೈಲ ದರಗಳನ್ನು ಅನಿಯಮಿತಗೊಳಿಸುವ ಹಾಗೂ ಸಬ್ಸಿಡಿಗಳನ್ನು ರದ್ದುಪಡಿಸುವ ಸಮಗ್ರ ತೈಲ ನೀತಿ ಸುಧಾರಣಾ ಪ್ಯಾಕೇಜೊಂದನ್ನು ಅನಾವರಣಗೊಳಿಸಿತು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ 2002ರಲ್ಲಿ ಎನ್‌ಡಿಎ ಸರಕಾರವು ಮೊದಲಿಗೆ ಎಲ್‌ಪಿಜಿ ಸಬ್ಸಿಡಿಯನ್ನು ದೃಢಗೊಳಿಸಿ, ಆನಂತರ ದರವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸುತ್ತಾ ಹೋಗಿ, ಕ್ರಮೇಣ ಸಬ್ಸಿಡಿಯನ್ನು ರದ್ದುಪಡಿಸಲು ನಿರ್ಧರಿಸಿತ್ತು. ಆದರೆ ಆ ಯೋಜನೆಯನ್ನು ಆನಂತರ ಕೈಬಿಡಲಾಯಿತು.
  ಯುಪಿಎ ಸರಕಾರದ ಎರಡನೆ ಅವಧಿಯಲ್ಲಿ , ಆಗಿನ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಆನಿಲ ಸಚಿವ (ಎಂಪಿಎನ್‌ಜಿ)ರಾಗಿದ್ದ ಜೈಪಾಲ್ ರೆಡ್ಡಿ,ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಕುಟುಂಬಗಳಿಗೆ ಎಲ್‌ಪಿಜಿ ಸಬ್ಸಿಡಿಯನ್ನು ನಿರಾಕರಿಸುವ ಸಮಗ್ರ ಯೋಜನೆಯೊಂದನ್ನು 2011ರ ಜುಲೈನಲ್ಲಿ ರೂಪಿಸಿದ್ದರು. ಕಾರು, ಮನೆ ಅಥವಾ ದ್ವಿಚಕ್ರ ವಾಹನದ ಒಡೆತನ ಹೊಂದಿರುವ ಕುಟುಂಬಗಳಿಗೆ ಸಬ್ಸಿಡಿಯನ್ನು ರದ್ದುಪಡಿಸುವ ಬಗ್ಗೆ ಅವರು ಯೋಚಿಸಿದ್ದರು. ಆದರೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳಿಂದಲೇ ಬಲವಾದ ವಿರೋಧ ವ್ಯಕ್ತವಾದ ಕಾರಣ ಈ ಪ್ರಸ್ತಾಪವು ಆರಂಭದಲ್ಲಿಯೇ ನೆಲಕಚ್ಚಿತು.
    ತದನಂತರ,ಮಾಜಿ ಹಣಕಾಸು ಕಾರ್ಯದರ್ಶಿ ಡಾ. ವಿಜಯ್ ಕೇಳ್ಕರ್ ನೇತೃತ್ವದ ಸಮಿತಿಯು ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು 2012-13ರ ಸಾಲಿನಲ್ಲಿ ಶೇ.25ರಷ್ಟು ಹಾಗೂ ಮುಂದಿನ ಎರಡು ವರ್ಷಗಳಲ್ಲಿ ಶೇ.75ರಷ್ಟು ಕಡಿತ ಮಾಡುವಂತೆ ಸಲಹೆ ನೀಡಿತು. ಇದರ ಜಾರಿಗೆ ಆಸಕ್ತಿ ತೋರಿದ ಯುಪಿಎ ಸರಕಾರವು 2012ರಲ್ಲಿ ಸಬ್ಸಿಡಿ ಇರುವ ಸಿಲಿಂಡರ್‌ಗಳ ಸಂಖ್ಯೆಯನ್ನು 6ಕ್ಕೆ ಮಿತಿಗೊಳಿಸಿತು. ಆದರೆ ಮೂರು ತಿಂಗಳ ಬಳಿಕ, ಅದನ್ನು 9ಕ್ಕೆ ಹೆಚ್ಚಿಸಿತು.
    2013ರ ಜೂನ್‌ನಲ್ಲಿ ಯುಪಿಎ ಸರಕಾರವು ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಖಾತೆಗೆ ವರ್ಗಾಯಿಸುವ (ಡಿಬಿಟಿ) ಕಾರ್ಯಕ್ರಮವನ್ನು ಆರಂಭಿಸಿತಾದರೂ,ಅದು ಕೇವಲ ಆರು ತಿಂಗಳವರೆಗೆ ನಡೆಯಿತು. ಆದರೆ ಯೋಜನೆಯ ಅನುಷ್ಠಾನದಲ್ಲಿ ಇರುವ ಲೋಪದೋಷಗಳನ್ನು ಬಗೆಹರಿಸಬೇಕಾಗಿದೆಯೆಂದು ಹೇಳಿ, ಅದನ್ನು 2014ರ ಜನವರಿಯಲ್ಲಿ ರದ್ದುಪಡಿಸಿತು. ಅದೇ ವರ್ಷದ ಜನವರಿ 30ರಂದು ಸಬ್ಸಿಡಿ ಸೌಲಭ್ಯವಿರುವ ಸಿಲಿಂಡರ್‌ಗಳ ಸಂಖ್ಯೆಯನ್ನು 12ಕ್ಕೇರಿಸಲಾಯಿತು.
      2014ರ ನವೆಂಬರ್ 15ರಂದು ನರೇಂದ್ರ ಮೋದಿ ಸರಕಾರವು ಡಿಬಿಟಿ ಯೋಜನೆಯನ್ನು, ‘ಪಹಲ್’ ಎಂಬ ಹೆಸರಿನೊಂದಿಗೆ ದೇಶಾದ್ಯಂತ 54 ಜಿಲ್ಲೆಗಳಲ್ಲಿ ಮರಳಿ ಜಾರಿಗೊಳಿಸಿತು. 2015ರ ಜನವರಿ 1ರಂದು ಅದನ್ನು ಇತರ 676 ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ಈ ಮೂಲಕ ಯೋಜನೆಗೆ ಅಖಿಲಭಾರತ ಮಟ್ಟದ ವ್ಯಾಪ್ತಿಯನ್ನು ನೀಡಲಾಯಿತು. ಡಿಬಿಟಿ ಯೋಜನೆಯಡಿ, ಗ್ರಾಹಕನು ಡೀಲರ್‌ನಿಂದ ಎಲ್‌ಪಿಜಿ ಪಡೆಯುವಾಗ ಅದಕ್ಕೆ ಮಾರುಕಟ್ಟೆ ದರವನ್ನು ಪಾವತಿಸುತ್ತಾನೆ. ಆನಂತರ ಸಬ್ಸಿಡಿಯ ಮೊತ್ತವನ್ನು ನೇರವಾಗಿ ಗ್ರಾಹಕನ ಖಾತೆಗೆ ವರ್ಗಾಯಿಸಲಾಗುತ್ತದೆ.
       ಹಾಲಿ ಹಣಕಾಸು ವರ್ಷದ ಆರಂಭದಲ್ಲಿ ಎಲ್‌ಪಿಜಿಯ ಮಾರುಕಟ್ಟೆ ದರವು ಪ್ರತಿ ಸಿಲಿಂಡರ್‌ಗೆ ಸರಾಸರಿ 788 ರೂ. ಆಗಿದ್ದರೆ, ಸಬ್ಸಿಡಿಯುಕ್ತವಾದ ಪ್ರತಿ ಸಿಲಿಂಡರ್‌ನ ಬೆಲೆ 420 ರೂ. ಆಗಿತ್ತು. ಈ ಪೈಕಿ ಪ್ರತಿ ಸಿಲಿಂಡರ್‌ಗೆ 366 ರೂ. ಸಬ್ಸಿಡಿ ನೀಡಲಾಗಿತ್ತು. ಆನಂತರ ಕಚ್ಚಾ ತೈಲ ಬೆಲೆಯಲ್ಲಿನ ಕುಸಿತಕ್ಕೆ ಅನುಗುಣವಾಗಿ ಎಲ್‌ಪಿಜಿಯ ಮಾರುಕಟ್ಟೆ ದರವು ಪ್ರತಿ ಸಿಲಿಂಡರ್‌ಗೆ 608ಕ್ಕೆ ಕುಸಿಯಿತು. ಆಗ ಸರಕಾರವು ಎಲ್‌ಪಿಜಿ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್‌ಗೆ 188 ರೂ. ಗೆ ಇಳಿಸಿತು. ಆದರೆ ಸಬ್ಸಿಡಿಯುಕ್ತವಾದ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ .
 ಡಿಬಿಟಿ/ಪಹಲ್ ಯೋಜನೆಯಡಿ, ಎಲ್ಲಾ ಎಲ್‌ಪಿಜಿಗಳ ಸಿಲಿಂಡರ್‌ಗಳನ್ನು ಮಾರುಕಟ್ಟೆ ದರದಲ್ಲಿಯೇ ಮಾರಾಟ ಮಾಡಲಾಗುತ್ತದೆ. ಹೀಗಾಗಿ ಇಲ್ಲಿ ಕಾಳಸಂತೆಗೆ, ಯಾವುದೇ ಉತ್ತೇಜನ ದೊರೆಯುವುದಿಲ್ಲ. ಜೊತೆಗೆ, ಈ ಯೋಜನೆಯಿಂದಾಗಿ ನಕಲಿ ಗ್ರಾಹಕರನ್ನು ಪಟ್ಟಿಯಿಂದ ತೆಗೆದುಹಾಕಿದ ಪರಿಣಾಮ, ಸರಕಾರಕ್ಕೆ ವಾರ್ಷಿಕವಾಗಿ 15 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಸಬ್ಸಿಡಿ ಉಳಿತಾಯವಾಗಿದೆ.


 ಎಲ್‌ಪಿಜಿ ಮೇಲಿನ ಒಟ್ಟು ಸಬ್ಸಿಡಿ ಪಾವತಿಯ ಮೊತ್ತವು 2013-14ರ ಸಾಲಿನಲ್ಲಿ 46 ಸಾವಿರ ಕೋಟಿ ರೂ.ಗೆ, 2014-15ರಲ್ಲಿ 40, 500 ಕೋಟಿ ರೂ. ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ 8,800 ಕೋಟಿ ರೂ.ಗೆ ಇಳಿಕೆಯಾಗಿದೆ.
ಕಿರು ಹೆಜ್ಜೆ: 2015-16ರ ಹಣಕಾಸು ವರ್ಷದಲ್ಲಿ ಎಲ್‌ಪಿಜಿ ಸಬ್ಸಿಡಿ ಮೊತ್ತದಲ್ಲಿನ ನಿರೀಕ್ಷಿತ ತೀವ್ರ ಕುಸಿತಕ್ಕೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಭಾರೀ ಇಳಿಕೆಯಾಗಿರುವುದೇ ಮುಖ್ಯ ಕಾರಣವೆನ್ನಲಾಗಿದೆ. ಸಬ್ಸಿಡಿ ಹಣದ ಸೋರಿಕೆಗೆ ಕಡಿವಾಣ ಹಾಕಿರುವುದೂ ಕೂಡಾ ಎಲ್‌ಪಿಜಿ ಸಬ್ಸಿಡಿ ಪಾವತಿಯ ಕುಸಿತಕ್ಕೆ ಇನ್ನೊಂದು ಕಾರಣವಾಗಿದೆ. ಆದರೆ ದೇಶವು ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳಲು ಸಾಧ್ಯವಿಲ್ಲ. 10 ಲಕ್ಷ ರೂ. ಗೂ ಅಧಿಕ ವಾರ್ಷಿಕ ಆದಾಯವಿರುವ ವ್ಯಕ್ತಿಗಳು ಎಲ್‌ಪಿಜಿ ಸಬ್ಸಿಡಿಯನ್ನು ತ್ಯಜಿಸುವಂತೆ ಸೂಚಿಸುವುದು ಈ ನಿಟ್ಟಿನಲ್ಲಿ ಇಟ್ಟಿರುವ ಇನ್ನೊಂದು ಪುಟ್ಟ ಹೆಜ್ಜೆಯಾಗಿದೆ.
 14.50 ಕೋಟಿ ಎಲ್‌ಪಿಜಿ ಸಬ್ಸಿಡಿ ಫಲಾನುಭವಿಗಳಲ್ಲಿ, ಆರ್ಥಿಕವಾಗಿ ಸ್ಥಿತಿವಂತರಾಗಿರುವವರು ದೊಡ್ಡ ಸಂಖ್ಯೆದಲ್ಲಿದ್ದಾರೆ. ಇಕನಾಮಿಕ್ ಟೈಮ್ಸ್ ಪತ್ರಿಕೆಯ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ಸಬ್ಸಿಡಿಯ ಕೇವಲ ಶೇ. 0.07ರಷ್ಟು ಭಾಗ ಮಾತ್ರ, ಶೇ.20ರಷ್ಟು ಕಡುಬಡತನದ ಕುಟುಂಬಗಳಿಗೆ ಲಭಿಸಿದೆ. ನಗರಪ್ರದೇಶಗಳಲ್ಲಿ ಶೇ.20ರಷ್ಟು ಕಡುಬಡವರು ಕೇವಲ ಸಬ್ಸಿಡಿಯ ಶೇ.8.2ರಷ್ಟು ಪ್ರಯೋಜನ ಪಡೆದಿದ್ದಾರೆ.
 ಇದೀಗ ಪ್ರಧಾನಿ ನೀಡಿರುವ ಸೂಚನೆಯು ಸ್ಪಷ್ಟವಾಗಿದೆ. ಶ್ರೀಮಂತರು/ಸ್ಥಿತಿವಂತರಿಗೆ ಸಬ್ಸಿಡಿಯನ್ನು ರದ್ದುಪಡಿಸಿ, ಅದನ್ನು ಬಡವರಿಗೆ ನೀಡಬೇಕೆಂದು ಅವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಬರೀ ಘೋಷಣೆಗಳು, ಜಾಹೀರಾತುಗಳ ಮೂಲಕ ಈ ಬಗ್ಗೆ ನೀಡುವ ಸಂದೇಶದಿಂದ ಇದನ್ನು ಸಾಧಿಸಲು ಸಾಧ್ಯವಿಲ್ಲ. ಅದನ್ನು ವಿಶ್ವಸನೀಯ ಹಾಗೂ ಸಮರ್ಥವಾಗಿ ಕಾರ್ಯರೂಪಕ್ಕೆ ತರಬೇಕಿದೆ.ಮೊದಲಿಗೆ ಅವರು ಗಿವ್ ಇಟ್ ಅಪ್ ಅಭಿಯಾನದಂತಹ ಮೃದು ಧೋರಣೆಯನ್ನು ಕೈಬಿಟ್ಟು, ಡೀಸೆಲ್‌ಗೆ ಮಾಡಿದಂತೆ ಎಲ್‌ಪಿಜಿ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು.
   ಇದರ ಜೊತೆಗೆ, ಸರಕಾರವು ತ್ವರಿತಗತಿಯಲ್ಲಿ ಬಡವರನ್ನು ಗುರುತಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಹಾಗೂ ಅದನ್ನು ಮೂರು ತಿಂಗಳೊಳಗೆ ಪೂರ್ಣಗೊ ಳಿಸಬೇಕು. ಆನಂತರ ಬಡವರಿಗೆ ನೇರನಗದು ವರ್ಗಾವಣೆ (ಡಿಬಿಟಿ) ಯೋಜನೆಯ ಮೂಲಕ ಸಬ್ಸಿಡಿ ಸೌಲಭ್ಯವನ್ನು ಒದಗಿಸಬೇಕು. ಪ್ರಸ್ತುತ ಕಚ್ಚಾ ತೈಲದ ಮಾರುಕಟ್ಟೆ ದರ ತೀವ್ರ ಕುಸಿದಿದ್ದು, ಪ್ರತಿ ಬ್ಯಾರಲ್‌ಗೆ 20 ಡಾಲರ್ ಆಗಿದೆ. ಹೀಗಾಗಿ, ಈ ಆದೇಶವನ್ನು ಜಾರಿಗೊಳಿಸಲು ಇದು ಸಕಾಲವಾಗಿದೆ. ಆರ್ಥಿಕವಾಗಿ ಸ್ಥಿತಿವಂತರಾಗಿರುವ ಗ್ರಾಹಕರು ಪ್ರತಿ ಸಿಲಿಂಡರ್‌ಗೆ ಹೆಚ್ಚುವರಿ 188 ರೂ. ಪಾವತಿಸುವುದಕ್ಕೆ ಹೆಚ್ಚು ಚಿಂತೆ ಮಾಡಲಾರರು.
  ಸಬ್ಸಿಡಿ ಸೌಲಭ್ಯದ ಹಿತದೃಷ್ಟಿಯಿಂದಲೂ ಕಾರ್ಯಾಚರಿಸಲು ಈಗ ಕಾಲ ಪಕ್ವವಾ ಗಿದೆ. ಇಂದು, ತೈಲ ದರ ತೀರಾ ಕುಸಿದಿರುವುದರಿಂದ 14.50 ಕೋಟಿ ಮಂದಿಗೆ ಎಲ್‌ಪಿಜಿ ಸಬ್ಸಿಡಿಯು ಸರಕಾರಕ್ಕೆ ದೊಡ್ಡ ಹೊರೆಯಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ತೈಲ ದರ ಏರಿದಲ್ಲಿ, ಸರಕಾರಕ್ಕೆ ಎಲ್‌ಪಿಜಿ ಸಬ್ಸಿಡಿಯನ್ನು ನಿಭಾಯಿಸುವುದೇ ದುಸ್ತರವಾದೀತು. ಹೀಗಾಗಿ, ಪ್ರಧಾನಿ ಕೂಡಲೇ ಕಾರ್ಯಪ್ರವೃತ್ತರಾಗಿ ಬಡವರಿಗೆ ಮಾತ್ರವೇ ಎಲ್‌ಪಿಜಿ ಸಬ್ಸಿಡಿಯನ್ನು ಸೀಮಿತಗೊಳಿಸಬೇಕು. ಇಲ್ಲದಿದ್ದಲ್ಲಿ ಅವರಿಗೆ ಈಗಿರುವ ಸದವಕಾಶವು ತಪ್ಪಿ ಹೋಗಲಿದೆ.
ಕೃಪೆ: ಡೆಕ್ಕನ್ ಹೆರಾಲ್ಡ್

Writer - ಉತ್ತಮ್ ಗುಪ್ತಾ

contributor

Editor - ಉತ್ತಮ್ ಗುಪ್ತಾ

contributor

Similar News