ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ನಿವಾರಣೆಗೆ ನೂತನ ಬಹು ಪೋಷಕಾಂಶ ಪೂರಕ ಆಹಾರ
ಹೊಸದಿಲ್ಲಿ,ಜ.14: ದೇಶದಲ್ಲಿ ಮಕ್ಕಳನ್ನು ವ್ಯಾಪಕವಾಗಿ ಕಾಡುತ್ತಿರುವ ರಕ್ತಹೀನತೆ ಸಮಸ್ಯೆಯನ್ನು ನಿಭಾಯಿಸಲು ನೂತನ ಬಹು ಪೋಷಕಾಂಶ ಪೂರಕ ಆಹಾರದೊಡನೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಯು ಸಜ್ಜಾಗಿದೆ.
ಭಾರತದಲ್ಲಿ ಶೇ.70ಕ್ಕೂ ಅಧಿಕ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದು, ಸರಕಾರವು ಕಳೆದ ಹಲವು ದಶಕಗಳಿಂದಲೂ ಕಬ್ಬಿಣಾಂಶ ಮತ್ತು ಫಾಲಿಕ್ ಆ್ಯಸಿಡ್‌ಯುಕ್ತ ಪೂರಕ ವಿತರಣೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಮಕ್ಕಳಲ್ಲಿ ವ್ಯಾಪಕವಾಗಿರುವ ರಕ್ತಹೀನತೆಯನ್ನು ತಡೆಗಟ್ಟಲು ಹೈದರಾಬಾದ್‌ನ ರಾಷ್ಟ್ರೀಯ ಪೋಷಕಾಂಶ ಸಂಸ್ಥೆಯು ಬಹು ಪೋಷಕಾಂಶ ಮಿಶ್ರಣವನ್ನು ಅಭಿವೃದ್ಧಿಗೊಳಿಸಿದೆ. ಇದನ್ನು ಮಕ್ಕಳಿಗೆ ಪೂರಕ ಪೋಷಕಾಂಶಗಳನ್ನು ಒದಗಿಸಲು ಸರಕಾರವು ಹಮ್ಮಿಕೊಂಡಿರುವ ಮಧ್ಯಾಹ್ನದೂಟದಂತಹ ಕಾರ್ಯಕ್ರಮಗಳಲ್ಲಿ ಸೇರಿಸಲಾಗುವುದು ಎಂದು ಐಸಿಎಂಆರ್‌ನ ಮಹಾ ನಿರ್ದೇಶಕಿ ಸೌಮ್ಯ ಸ್ವಾಮಿನಾಥನ್ ಅವರು ಗುರುವಾರ ಇಲ್ಲಿ ತಿಳಿಸಿದರು.
ಈ ಬಗ್ಗೆ ನಾವು ಮಹಿಳಾ ಮತ್ತು ಮಕ್ಕಳ ಸಚಿವಾಲಯದೊಂದಿಗೆ ಮಾತುಕತೆಯನ್ನು ಆರಂಭಿಸಿದ್ದೇವೆ ಎಂದ ಅವರು, ಸಂಶೋಧನೆಯ ಆರಂಭಿಕ ಪ್ರಯೋಗಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು ಮಕ್ಕಳಲ್ಲಿ ರಕ್ತಹೀನತೆಯ ಮಟ್ಟ ಗಮನೀಯ ಪ್ರಮಾಣದಲ್ಲಿ ತಗ್ಗಿರುವುದು ಕಂಡುಬಂದಿದೆ ಎಂದರು. //////////
ಲೋಕಾಪಾಲ ಹುದ್ದೆಗೆ 16 ಅರ್ಜಿದಾರರಲ್ಲಿ ಮೂವರು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರು
ಹೊಸದಿಲ್ಲಿ,ಜ.14: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸೃಷ್ಟಿಸಲಾಗಿರುವ ಲೋಕಪಾಲ ಹುದ್ದೆಗೆ ಅರ್ಜಿ ಸಲ್ಲಿಸಿರುವವರಲ್ಲಿ ಸರ್ವೋಚ್ಚ ನ್ಯಾಯಾಲಯದ ಮೂವರು ನಿವೃತ್ತ ನ್ಯಾಯಾಧೀಶರು, ಓರ್ವ ಮಾಜಿ ಹೈಕೋರ್ಟ್ ಮುಖ್ಯ ನಾಯಾಧೀಶ,ಯುಜಿಸಿಯ ಓರ್ವ ಸದಸ್ಯರು ಮತ್ತು ಮಾಜಿ ಮಾಹಿತಿ ಆಯುಕ್ತರೋರ್ವರು ಸೇರಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಸ್ ಅಗರವಾಲ್ ಅವರ ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಆಯುಕ್ತ ಸುಧೀರ ಭಾರ್ಗವ ಅವರ ಆದೇಶದ ಬಳಿಕ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಸರ್ವೋಚ್ಚ ನ್ಯಾಯಾಲಯವು ಲೋಕಪಾಲ ಹುದ್ದೆಗಾಗಿ ತನ್ನ ನಿವೃತ್ತ ನಾಯಾಧೀಶರಾದ ನ್ಯಾ.ಜ್ಞಾನಸುಧಾ ಮಿಶ್ರಾ, ನ್ಯಾ.ಸಿ.ಕೆ.ಪ್ರಸಾದ್ ಮತ್ತು ನ್ಯಾ.ಬಲ್ಬೀರ್ ಸಿಂಗ್ ಚೌಹಾಣ್ ಅವರನ್ನು ನಾಮಕರಣಗೊಳಿಸಿದೆ.
ಜಾರ್ಖಂಡ್ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶ ಹಾಗೂ ಹಾಲಿ ವಿದ್ಯುಚ್ಛಕ್ತಿ ಮೇಲ್ಮನವಿ ನ್ಯಾಯಾಧಿಕರಣದ ಅಧ್ಯಕ್ಷ ಎಂ.ಕರ್ಪಗ ವಿನಾಯಕಂ,ಮಾಜಿ ಯುಜಿಸಿ ಸದಸ್ಯ ಎಂ.ಎಂ.ಅನ್ಸಾರಿ ಹಾಗೂ ಮಾಜಿ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯಲು ಅವರೂ ಹುದ್ದೆಗೆ ನೇರವಾಗಿ ಅರ್ಜಿ ಸಲ್ಲಿಸಿದವರಲ್ಲಿ ಸೇರಿದ್ದಾರೆ.
ಶಿಕ್ಷಕ ಅರುಣ ಗಣೇಶ ಜೋಗದೇವ್,ಸಾಮಾಜಿಕ ಕಾರ್ಯಕರ್ತರಾದ ಚಂದ್ರಭೂಷಣ ಮಿಶ್ರಾ ಮತ್ತು ಚಪ್ಪಿಡಿ ವೆಂಕಟೇಶ್ವರ ನಾನಾ ರಾವ್,ಪತ್ರಕರ್ತ ಗುಲ್ಶನ್ ಕುಮಾರ ಬಾಜ್ವಾ,ವಕೀಲ ವಿನಯ ಭೂಷಣ ಭಾಟಿಯಾ, ಉಕ್ಕು ಕಂಪನಿಯ ಉದ್ಯೋಗಿ ಅಂಜನಿ ಕುಮಾರ,ನಿವೃತ್ತ ಐಎಎಸ್ ಅಧಿಕಾರಿ ರಾಮ್ ಸಜಿವಾನ್,ನಿವೃತ್ತ ಐಪಿಎಸ್ ಅಧಿಕಾರಿ ಕೆ.ನಂದಬಾಲನ್ ಮತ್ತಿತರರು ಈ ಪಟ್ಟಿಯಲ್ಲಿದ್ದಾರೆ.
ರಾಮ್ ಸಜಿವಾನ್ ಅವರ ಅರ್ಜಿಯು ಗಡುವು ಮುಗಿದ ನಂತರ ಸಲ್ಲಿಕೆಯಾಗಿದ್ದು, ಮಧ್ಯಪ್ರದೇಶ ಸರಕಾರವು ಅದನ್ನು ಕಳುಹಿಸಿತ್ತು. ಲೋಕಪಾಲ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಅರ್ಜಿದಾರರ ಹೆಸರುಗಳನ್ನು ಬಹಿರಂಗಗೊಳಿಸುವುದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕರ ವಿಶ್ವಾಸ ಹೆಚ್ಚುತ್ತದೆ ಎಂದು ಮಾಹಿತಿ ಆಯುಕ್ತರು ಡಿಒಪಿಟಿಗೆ ನೀಡಿದ್ದ ನಿರ್ದೇಶದಲ್ಲಿ ತಿಳಿಸಿದ್ದರು.