ಭಾರತ ವಿರುದ್ಧದ ಮೊದಲ ಟ್ವೆಂಟಿ-20ಗೆ ಮ್ಯಾಕ್ಸ್‌ವೆಲ್ ಅಲಭ್ಯ
ಅಡಿಲೇಡ್, ಜ.24: ಮೆಲ್ಬೋರ್ನ್ ಏಕದಿನ ಪಂದ್ಯದ ವೇಳೆ ಮಂಡಿನೋವಿಗೆ ಒಳಗಾಗಿದ್ದ ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮಂಗಳವಾರ ನಡೆಯಲಿರುವ ಭಾರತ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಿಂದ ಹೊರಗುಳಿದಿದ್ದಾರೆ.
ಗಾಯದ ಸಮಸ್ಯೆಯ ಕಾರಣದಿಂದ ಮ್ಯಾಕ್ಸ್‌ವೆಲ್ ಶನಿವಾರ ಸಿಡ್ನಿಯಲ್ಲಿ ನಡೆದಿದ್ದ ಧೋನಿ ಪಡೆ ವಿರುದ್ಧದ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಜ.29 ರಂದು ನಡೆಯಲಿರುವ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಲಭ್ಯವಿರುವ ಸಾಧ್ಯತೆಯಿದೆ.
‘‘ಮ್ಯಾಕ್ಸ್‌ವೆಲ್ ಈಗಲೂ ಸ್ವಲ್ಪ ಪ್ರಮಾಣದ ಗಾಯದಿಂದ ಬಳಲುತ್ತಿದ್ದಾರೆ...ಅವರು ಮೆಲ್ಬೋರ್ನ್‌ನಲ್ಲಿರುವ ತಮ್ಮ ಮನೆಯಲ್ಲಿ ಸ್ವಲ್ಪ ಸಮಯ ಕಳೆದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ’’ ಎಂದು ಹಂಗಾಮಿ ಕೋಚ್ ಮೈಕಲ್ ಡಿ ವೆನುಟೊ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮ್ಯಾಕ್ಸ್‌ವೆಲ್ ಇತ್ತೀಚೆಗೆ ಕೊನೆಗೊಂಡ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದು, 56.33ರ ಸರಾಸರಿಯಲ್ಲಿ ಒಟ್ಟು 169 ರನ್ ಗಳಿಸಿದ್ದರು.
ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಆಡದೇ ಇರುವ ಕಾರಣ ಅವರ ಬದಲಿ ಆಟಗಾರನಾಗಿ ಟ್ರೆವಿಡ್ ಹೆಡ್ ಆಡುವ ಸಾಧ್ಯತೆಯಿದೆ. ಹೆಡ್‌ಗೆ ಇದು ಚೊಚ್ಚಲ ಪಂದ್ಯವಾಗಿದೆ