ವಿಯೆಟ್ನಾಂನಲ್ಲಿ ಭಾರತದ ಉಪಗ್ರಹ ಕೇಂದ್ರ ಚೀನಾಕ್ಕೆ ಸಡ್ಡು

Update: 2016-01-25 14:48 GMT

ಹೊಸದಿಲ್ಲಿ/ಹಾಂಕಾಂಗ್, ಜ. 25: ಭಾರತ ವಿಯೆಟ್ನಾಂನಲ್ಲಿ ಉಪಗ್ರಹ ಅನುಸರಣೆ ಮತ್ತು ಇಮೇಜಿಂಗ್ ಕೇಂದ್ರವೊಂದನ್ನು ತೆರೆಯಲಿದೆ. ಇದರ ಮೂಲಕ ಚೀನಾ, ದಕ್ಷಿಣ ಚೀನಾ ಸಮುದ್ರವನ್ನೊಳಗೊಂಡ ಈ ವಲಯದ ಮೇಲೆ ನಿಗಾ ಇಡುವ ಭಾರತೀಯ ಭೂ ಸರ್ವೇಕ್ಷಣೆ ಉಪಗ್ರಹಗಳಿಂದ ಬರುವ ಚಿತ್ರಗಳನ್ನು ವಿಯೆಟ್ನಾಂ ನೋಡಬಹುದಾಗಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೆಳವಣಿಗೆಯು ಭಾರತ ಮತ್ತು ವಿಯೆಟ್ನಾಂಗಳ ಬಾಂಧವ್ಯವನ್ನು ಇನ್ನಷ್ಟು ಬೆಸೆಯಲಿದೆ. ಹಾಗೂ, ಅದೇ ವೇಳೆ, ಚೀನಾದ ಕಣ್ಣು ಕೆಂಪಗಾಗಿಸುವ ಸಾಧ್ಯತೆಯಿದೆ. ಭಾರತ ಮತ್ತು ವಿಯೆಟ್ನಾಂಗಳೆರಡೂ ಚೀನಾದೊಂದಿಗೆ ಸುದೀರ್ಘ ಗಡಿ ವಿವಾದಗಳನ್ನು ಹೊಂದಿರುವುದನ್ನು ಸ್ಮರಿಸಬಹುದಾಗಿದೆ.

 ನಾಗರಿಕ ಉಪಯೋಗದ ಸಂಸ್ಥಾಪನೆ ಎಂಬುದಾಗಿ ಬಣ್ಣಿಸಲಾಗಿರುವ ಈ ಕೇಂದ್ರವು ಕೃಷಿ, ವಿಜ್ಞಾನ ಹಾಗೂ ಪರಿಸರ ಸಂಬಂಧಿ ಮಾಹಿತಿಗಳನ್ನು ನೀಡಲಿದೆ. ಅದೇ ವೇಳೆ, ಸುಧಾರಿತ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸಿದರೆ, ಚಿತ್ರಗಳನ್ನು ಸೇನಾ ಉದ್ದೇಶಗಳಿಗಾಗಿಯೂ ಬಳಸಬಹುದಾಗಿದೆ ಎಂದು ಭದ್ರತಾ ಪರಿಣತರು ಹೇಳುತ್ತಾರೆ.

 ದಕ್ಷಿಣ ಚೀನಾ ಸಮುದ್ರ ವಿವಾದದ ಹಿನ್ನೆಲೆಯಲ್ಲಿ ವಿಯೆಟ್ನಾಂ ಮತ್ತು ಚೀನಾದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ವಿಯೆಟ್ನಾಂ ಸುಧಾರಿತ ಗುಪ್ತಚರ, ನಿಗಾ ಮತ್ತು ಸರ್ವೇಕ್ಷಣೆ ತಂತ್ರಜ್ಞಾನಗಳಿಗಾಗಿ ಎದುರು ನೋಡುತ್ತಿದೆ.

‘‘ಸೇನೆಗೆ ಸಂಬಂಧಿಸಿ ಹೇಳುವುದಾದರೆ, ಈ ಬೆಳವಣಿಗೆ ಮಹತ್ವದ್ದಾಗಿದೆ’’ ಎಂದು ಸಿಂಗಾಪುರದ ಎಸ್. ರಾಜರತ್ನಂ ಸ್ಕೂಲ್ ಆಫ್ ಇಂಟರ್‌ನ್ಯಾಶನಲ್ ಸ್ಟಡೀಸ್‌ನ ಸಾಗರ ಭದ್ರತಾ ಪರಿಣತ ಕಾಲಿನ್ ಕೋಹ್ ಹೇಳುತ್ತಾರೆ. ‘‘ಈ ಕ್ರಮದಿಂದ ಎರಡೂ ದೇಶಗಳಿಗೆ ಲಾಭವಿದೆ. ವಿಯೆಟ್ನಾಂನ ಹಲವು ಲೋಪದೋಷಗಳು ನಿವಾರಣೆಯಾದರೆ, ಭಾರತದ ವ್ಯಾಪ್ತಿ ಹಿಗ್ಗಿದೆ’’ ಎಂದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊ ಚಿ ಮಿನ್ ನಗರದಲ್ಲಿ ಸ್ಥಾಪಿಸಲಾಗುವ ಉಪಗ್ರಹ ಅನುಸರಣೆ ಮತ್ತು ಮಾಹಿತಿ ಸ್ವೀಕಾರ ಕೇಂದ್ರದ ವೆಚ್ಚವನ್ನು ಭರಿಸಲಿದೆ. ಇಲ್ಲಿಂದ ಭಾರತೀಯ ಉಪಗ್ರಹಗಳ ಉಡಾವಣೆಯ ಮೇಲೆ ನಿಗಾ ಇಡಬಹುದಾಗಿದೆ. ಇದರ ವೆಚ್ಚ ಸುಮಾರು 155 ಕೋಟಿ ರೂಪಾಯಿ ಎಂದು ಭಾರತೀಯ ಮಾಧ್ಯಮಗಳು ಅಂದಾಜಿಸಿವೆ.

ಇಸ್ರೋದ ವ್ಯಾಪ್ತಿ ವಿಸ್ತರಣೆ

54 ವರ್ಷಗಳ ಇತಿಹಾಸವನ್ನು ಒಳಗೊಂಡಿರುವ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ವಿಸ್ತಾರಗೊಳ್ಳುತ್ತಿದೆ. ಪ್ರತಿ ತಿಂಗಳು ಒಂದು ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ. ಉಡಾವಣೆಯ ಆರಂಭಿಕ ಹಂತಗಳಲ್ಲಿ ಉಪಗ್ರಹಗಳ ಚಲನೆಯ ಮೇಲೆ ನಿಗಾ ಇಡಲು ಇಸ್ರೋ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಬ್ರೂನೆ, ಇಂಡೋನೇಶ್ಯದ ಬಿಯಾಕ್ ಮತ್ತು ಮಾರಿಶಸ್‌ಗಳಲ್ಲಿ ಭೂಕೇಂದ್ರಗಳನ್ನು ಹೊಂದಿದೆ. ವಿಯೆಟ್ನಾಂನಲ್ಲಿ ಇಂಥ ಇನ್ನೊಂದು ಕೇಂದ್ರವನ್ನು ಹೊಂದಿರುವುದು ಇಸ್ರೋದ ಸಾಮರ್ಥ್ಯವನ್ನು ಇನ್ನಷ್ಟು ಹಿಗ್ಗಿಸಲಿದೆ ಎಂದು ಇಸ್ರೋ ವಕ್ತಾರ ದೇವಿಪ್ರಸಾದ್ ಕಾರ್ಣಿಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News