ಹೆಡ್ಲಿ ಸಾಕ್ಷವನ್ನು ಪ್ರಶ್ನಿಸಿದ ಇಶ್ರತ್ ಕುಟುಂಬ

Update: 2016-02-11 18:27 GMT

ಮುಂಬೈ, ಫೆ.11: ಗುಜರಾತ್‌ನಲ್ಲಿ ನಕಲಿ ಎನ್‌ಕೌಂಟರ್‌ಗೆ ಬಲಿಯಾದ ಇಶ್ರತ್ ಜಹಾನ್, ಲಷ್ಕರೆ ತಯ್ಯಿಬಾ ಉಗ್ರಗಾಮಿ ಗುಂಪಿನ ಸದಸ್ಯೆಯೆಂದು, 26/11 ದಾಳಿ ಸಂಚಿನ ಆರೋಪಿ ಡೇವಿಡ್ ಕೋಲ್‌ಮನ್ ಹೆಡ್ಲಿಯ ಹೇಳಿಕೆಯನ್ನು, ಆಕೆಯ ಕುಟುಂಬ ಸದಸ್ಯರು ಹಾಗೂ ನ್ಯಾಯವಾದಿ ಪ್ರಶ್ನಿಸಿದ್ದಾರೆ. ‘‘ಕೆಲವು ದೊಡ್ಡ ವ್ಯಕ್ತಿಗಳ ರಾಜಕೀಯ ಲಾಭಕ್ಕಾಗಿ, ಇಶ್ರತ್ ಹೆಸರಿಗೆ ಮಸಿ ಬಳಿಯಲಾಗುತ್ತಿದೆ’’ ಎಂದವರು ಹೇಳಿದ್ದಾರೆ.
   19 ವರ್ಷ ವಯಸ್ಸಿನ ಕಾಲೇಜ್ ಯುವತಿ ಇಶ್ರತ್‌ಗೆ, ಉಗ್ರ ಗುಂಪಿನ ಜೊತೆಗೆ ಯಾವುದೇ ರೀತಿಯ ನಂಟಿರಲಿಲ್ಲವೆಂದು ಆಕೆಯ ಸಹೋದರಿ ಮುಶ್ರತ್ ಹಾಗೂ ನ್ಯಾಯವಾದಿ ವೃಂದಾ ಗ್ರೋವರ್ ಹೇಳಿದ್ದಾರೆ. ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ಹೆಡ್ಲಿಯ ವಿಚಾರಣೆಗೆ , ಸರಕಾರಿ ವಕೀಲ ಉಜ್ವಲ್ ನಿಕಮ್ ಅನುಸರಿಸುತ್ತಿರುವ ತಂತ್ರಗಾರಿಕೆಯನ್ನೂ ಗ್ರೋವರ್ ಪ್ರಶ್ನಿಸಿದ್ದಾರೆ. ನಿಕಮ್ ಅವರು ಹೆಡ್ಲಿಗೆ ಕೇಳಿದ ಕೆಲವು ಪ್ರಶ್ನೆಗಳು, ಮುಂಬೈ ದಾಳಿ ಪ್ರಕರಣದ ಜೊತೆ ಯಾವ ರೀತಿಯ ಸಂಬಂಧವನ್ನೂ ಹೊಂದಿರಲಿಲ್ಲ. ಬದಲಿಗೆ ಅವು ‘ರಾಜಕೀಯವಾಗಿ ಪ್ರಸ್ತುತತೆ’ ಹೊಂದಿದ್ದವು ಎಂದು ಟೀಕಿಸಿದ್ದಾರೆ.
‘‘ಇಶ್ರತ್‌ಜಹಾನ್ ಹತ್ಯೆಯಲ್ಲಿ ಹಲವು ದೊಡ್ಡ ವ್ಯಕ್ತಿಗಳು ಶಾಮೀಲಾಗಿದ್ದರು. ಅವರು ರಾಜಕೀಯ ಲಾಭಕ್ಕಾಗಿ ಹೇಡ್ಲಿ ಹೀಗೆ ಹೇಳಿದ್ದಾನೆ. ಸ್ವತಃ ಭಯೋತ್ಪಾದಕನಾದ ಹೆಡ್ಲಿ ಅವೆುರಿಕದ ಜೈಲಿನಲ್ಲಿರುವಾಗ ಆತನ ಹೇಳಿಕೆಯನ್ನು ಹೇಗೆ ಪರಿಗಣಿಸಲು ಸಾಧ್ಯ?ಎಂದು ಮುಶ್ರತ್ ಪ್ರಶ್ನಿಸಿದ್ದಾರೆ.
   ಹೆಡ್ಲಿಯ ಹೇಳಿಕೆಯ ಮೂಲಕ ಇಶ್ರತ್‌ಳ ಹೆಸರನ್ನು ಭಯೋತ್ಪಾದನೆಯ ಜೊತೆ ತಳುಕುಹಾಕಲು ಪ್ರಯತ್ನಗಳು ನಡೆಯುತ್ತಿವೆಯೆಂದು ಆಕೆಯ ಚಿಕ್ಕಪ್ಪ ರವೂಫ್ ವಿಷಾದಿಸಿದ್ದಾರೆ. ‘‘ ಇಶ್ರತ್ ಹತ್ಯೆಯಿಂದ ತಮ್ಮ ಹೆಸರಿಗೆ ತಗಲಿದ ಕಳಂಕವನ್ನು ತೊಡೆದುಹಾಕಲು, ಕೆಲವರು ನಡೆಸಿದ ಷಡ್ಯಂತ್ರ ಇದಾಗಿದೆಯೆಂದು, ಇಶ್ರತ್‌ತಾಯಿ ಶಮಿನಾ ಕೌಸರ್ ಹೇಳಿದ್ದಾರೆ. ಹೆಡ್ಲಿಯ ವಿಚಾರಣೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಹೆಡ್ಲಿಗೆ ಕೇಳಿದ ಪ್ರಶ್ನೆಯೊಂದರಲ್ಲಿ, ಆತನಿಗೆ ಮೂರು ಆಯ್ಕೆಗಳನ್ನು ನೀಡಿರುವುದು ಕಾನೂನಿಗೆ ವಿರುದ್ಧವಾಗಿದೆಯೆಂದು ಆಕೆ ಹೇಳಿದ್ದಾರೆ. ನಿಕಮ್ ಅವರು ಹೆಡ್ಲಿಗೆ, ‘‘ನೂರ್‌ಜಹಾನ್, ಇಶ್ರತ್ ಜಹಾನ್ ಹಾಗೂ ಮುಮ್ತಾಝ್ ಬೇಗಂ’ ಹೀಗೆ ಮೂರು ಹೆಸರುಗಳನ್ನು ಹೇಳುತ್ತಿದ್ದೇನೆ. ಅವರಲ್ಲಿ ಲಷ್ಕರೆ ತಯ್ಯಿಬಾದ ಆತ್ಮಹತ್ಯಾ ಬಾಂಬರ್‌ನ ಹೆಸರನ್ನು ಆಯ್ಕೆ ಮಾಡುವಂತೆ ತಿಳಿಸಿದ್ದರು.
 ಆಗ ಹೆಡ್ಲಿ ಇಶ್ರತ್ ಜಹಾನ್‌ಳ ಹೆಸರನ್ನು ಆಯ್ದುಕೊಂಡ. ಆದರೆ ಆತ ಬೇರೆಯವರು ಹೇಳಿದ್ದನ್ನು ಕೇಳಿದ್ದೇನೆಯೇ ಹೊರತು ವೈಯಕ್ತಿವಾಗಿ ಆಕೆಯ ಬಗ್ಗೆ ತನಗೆ ತಿಳಿದಿಲ್ಲವೆಂದು ಆತ ಹೇಳಿರುವುದಾಗಿ ಗ್ರೋವರ್ ತಿಳಿಸಿದ್ದಾರೆ.‘‘ಹೆಡ್ಲಿಯ ಸಾಕ್ಷ ನೀಡಿಕೆಯ ಹಿಂದೆ ರಾಜಕೀಯ ಸಂಚಿದೆ’’ ಎಂದವರು ಆರೋಪಿಸಿದ್ದಾರೆ.

 ಇಶ್ರತ್ ಹತ್ಯೆಯಿಂದ ತಮ್ಮ ಹೆಸರಿಗೆ ತಗಲಿದ ಕಳಂಕವನ್ನು ತೊಡೆದುಹಾಕಲು, ಕೆಲವರು ನಡೆಸಿದ ಷಡ್ಯಂತ್ರ ಇದಾಗಿದೆ. -ಶಮಿನಾ ಕೌಸರ್, ಇಶ್ರತ್‌ಜಹಾನ್ ತಾಯಿ


ಇಶ್ರತ್ ಅಮಾಯಕಳಾಗಿದ್ದು, ಆಕೆಯನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿತ್ತೆಂಬುದನ್ನು ಭಾರತೀಯ ತನಿಖಾಧಿಕಾರಿಗಳೇ ಬಹಿರಂಗಪಡಿಸಿದ್ದಾರೆ. ಇಶ್ರತ್ ಹತ್ಯೆಯು ಒಂದು ರಾಜಕೀಯ ಸಂಚು.
-ಮುಶ್ರತ್, ಇಶ್ರತ್‌ಜಹಾನ್ ಸಹೋದರಿ


ಹೆಡ್ಲಿಯ ವಿಚಾರಣೆ ಸಂದರ್ಭದಲ್ಲಿ ಇಶ್ರತ್‌ಳ ಹೆಸರನ್ನು ಉಜ್ವಲ್ ನಿಕಂ ಹಠಾತ್ತನೆ ಪ್ರಸ್ತಾಪಿಸಿರುವುದು ತನಗೆ ಅಚ್ಚರಿಯುಂಟು ಮಾಡಿದೆ.
-ವೃಂದಾ ಗ್ರೋವರ್, ನ್ಯಾಯವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News