ಜೈಲಲ್ಲೂ ಸಂಜಯ್ ದತ್ ಶೋ ಸೂಪರ್ ಹಿಟ್ !

Update: 2016-02-12 09:50 GMT

ಮುಂಬೈ , ಫೆ. 12 : ಕಲಾವಿದ ಎಲ್ಲಿ ಹೋದರೂ ಕಲಾವಿದನಾಗಿಯೇ ಇರುತ್ತಾನೆ. ' ಲಗೇ ರಹೋ ಮುನ್ನಾಭಾಯ್ ' ಚಿತ್ರದಲ್ಲಿ ರೇಡಿಯೋ ಜಾಕಿ ಆಗಿ ಬದಲಾಗುವ ಗೂಂಡಾ ಪಾತ್ರದಲ್ಲಿ ಭರ್ಜರಿ ಯಶಸ್ಸು ಪಡೆದಿದ್ದ ಸಂಜಯ್ ದತ್ ಅವರ ನಿಜ ಜೀವನದಲ್ಲೂ ಈಗ  ಅದೇ ಪುನರಾವರ್ತನೆಯಾಗಿದೆ. ಮುಂಬೈ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿ ಪುಣೆಯ ಯರವಾಡ ಜೈಲಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಂಜೂ ಬಾಬಾ ಮತ್ತೆ ರೇಡಿಯೋ ಜಾಕಿ ಆಗಿ ಜಯಭೇರಿ ಬಾರಿಸಿದ್ದಾರೆ. ಈ ರೇಡಿಯೋ ಸ್ಟೇಶನ್ ಇರುವುದು ಜೈಲಲ್ಲೆ ಎಂಬುದು ವಿಶೇಷ. 

ಯರವಾಡ ಜೈಲಿನ ರೇಡಿಯೋ ಸ್ಟೇಶನ್ ಜೈಲಿನ ಆಡಳಿತಾಧಿಕಾರಿ ಕಚೇರಿಯ ಬಳಿಯೇ ಇದೆ. ಇದರಲ್ಲಿ ' ಆಪ್ ಕಿ ಫ಼ರ್ಮಾಯಿಶ್ ' ಎಂಬ ಕಾರ್ಯಕ್ರಮವನ್ನು ಸಂಜಯ್ ದತ್ ಕಳೆದ ಜುಲೈ ನಲ್ಲಿ  ಪ್ರಾರಂಭಿಸಿದ್ದು ಈಗ ಅದು ಸೂಪರ್ ಹಿಟ್ ಆಗಿದೆ. ಭಾರೀ ಭದ್ರತೆಯ ಈ ಜೈಲಿನಲ್ಲಿ ವಿವಿಧ ವಿಭಾಗಗಳಲ್ಲಿ 4133 ಖೈದಿಗಳಿದ್ದಾರೆ. 

ಸಂಜಯ್ ದತ್ ಜೊತೆ ಈ ಕಾರ್ಯಕ್ರಮದಲ್ಲಿ ಇನ್ನೂ ಮೂವರು ರೇಡಿಯೋ ಜಾಕಿಗಳಿದ್ದಾರೆ . ಅವರೂ ಖೈದಿಗಳೇ. ಇದರಲ್ಲಿ ಖೈದಿಗಳು ಅವರಿಗಿಷ್ಟದ ಹಾಡು ಅಥವಾ ನಟರ ಡೈಲಾಗ್ ಗಳನ್ನೂ ಕೇಳಬಹುದು. ಖೈದಿಗಳೇ ಬರೆದ ಕವನಗಳನ್ನೂ ಇಲ್ಲಿ ಓದಿ ಕೇಳಿಸಲಾಗುತ್ತದೆ. ಈಗ ಪ್ರತಿದಿನ ನಾಲ್ಕು ಷೋ ಗಳು ನಡೆಯುತ್ತಿದ್ದು ಜೈಲಧಿಕಾರಿಗಲು ಇದಕ್ಕೆ ಮಾರ್ಗ ದರ್ಶನ ನೀಡುತ್ತಿದ್ದಾರೆ. 

"ನಮಸ್ಕಾರ ಭಾಯ್ ಲೋಗ್ " ಎಂದೇ ಪ್ರಾರಂಭಿಸುವ ಸಂಜಯ್ ಈಗ ಇಡೀ ಜೈಲಿನ ಖೈದಿಗಳ ನೆಚ್ಚಿನ ರೇಡಿಯೋ ಜಾಕಿ ಆಗಿದ್ದಾರೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಸಂಜಯ್ ಗೆ ಈಗ ತಮ್ಮ ಚಿತ್ರದ ಹಾಡು ಹಾಗು ಡೈಲಾಗ್ ಗಳಿಗೇ ಹೆಚ್ಚು ಬೇಡಿಕೆ ಬರುತ್ತಿದೆಯಂತೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News