ಜೆಎನ್‌ಯು ವಿದ್ಯಾರ್ಥಿ ನಾಯಕನ ಸೆರೆ
♦ ಮೂರು ದಿನ ಪೊಲೀಸ್ ಕಸ್ಟಡಿಗೆ ♦ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ
ಹೊಸದಿಲ್ಲಿ, ಫೆ.12: ಸಂಸತ್ ದಾಳಿಯ ರೂವಾರಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಜವಾಹರಲಾಲ್ ನೆಹರೂ ವಿವಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಸಂಬಂಧಿಸಿ ದಾಖಲಾಗಿರುವ ರಾಷ್ಟ್ರದ್ರೋಹ ಮತ್ತು ಕ್ರಿಮಿನಲ್ ಒಳಸಂಚು ಪ್ರಕರಣದಲ್ಲಿ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯಾ ಕುಮಾರ್ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಧೀಶರು ಮೂರು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಿರುವ ವಿದ್ಯಾರ್ಥಿ ಒಕ್ಕೂಟವು, ಪೊಲೀಸರು ಸುಳ್ಳು ಆರೋಪಗಳಲ್ಲಿ ವಿದ್ಯಾರ್ಥಿಗಳನ್ನು ಬೇಟೆಯಾಡುತ್ತಿದ್ದಾರೆ ಮತ್ತು ಆರೆಸ್ಸೆಸ್ ಜೆಎನ್‌ಯುವನ್ನು ಮುಚ್ಚಲು ಬಯಸು ತ್ತಿದೆ ಎಂದು ಆರೋಪಿಸಿದೆ.
ಬಿಜೆಪಿ ಸಂಸದ ಮಹೇಶ ಗಿರಿ ಮತ್ತು ಎಬಿವಿಪಿ ದೂರುಗಳ ಮೇರೆಗೆ ವಸಂತ ಕುಂಜ್ ಪೊಲೀಸ್ ಠಾಣೆಯಲ್ಲಿ ಗುರುವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ದೇಶದ್ರೋಹ ಮತ್ತು ಕ್ರಿಮಿನಲ್ ಒಳಸಂಚು ಪ್ರಕರಣ ದಾಖಲಾಗಿತ್ತು. ಮಂಗಳವಾರ ಜೆಎನ್‌ಯು ಕ್ಯಾಂಪಸ್‌ನಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದ ವಿದ್ಯಾರ್ಥಿಗಳ ಗುಂಪೊಂದು ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದರ ವಿರುದ್ಧ ಘೋಷಣೆಗಳನ್ನು ಕೂಗಿತ್ತು. ಇದಕ್ಕೂ ಮುನ್ನ ಇದೊಂದು ರಾಷ್ಟ್ರವಿರೋಧಿ ಚಟುವಟಿಕೆ ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ದೂರು ನೀಡಿದ ಬಳಿಕ ವಿವಿ ಅಧಿಕಾರಿಗಳು ಅನುಮತಿ ಯನ್ನು ರದ್ದುಗೊಳಿಸಿದ್ದರೂ ಕಾರ್ಯಕ್ರಮವು ನಡೆದಿತ್ತು.
ನಾನು ಯಾವುದೇ ದೇಶವಿರೋಧಿ ಘೋಷಣೆಗಳನ್ನು ಕೂಗಿಲ್ಲ. ಭಾರತೀಯ ಸಂವಿಧಾನದ ಕುರಿತಂತೆ ನನಗೆ ಅತೀವ ಗೌರವವಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವುದು ನನ್ನ ನಂಬಿಕೆ. ( ನ್ಯಾಯಾಧೀಶರ ಎದುರು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯಾ)
...............
ಎಸ್‌ಎಆರ್ ಗೀಲಾನಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
ಹೊಸದಿಲ್ಲಿ, ಫೆ.12: ಇಲ್ಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದಿಲ್ಲಿ ವಿವಿಯ ಮಾಜಿ ಉಪನ್ಯಾಸಕ ಎಸ್‌ಎಆರ್ ಗೀಲಾನಿ ವಿರುದ್ಧ ದೇಶದ್ರೋಹ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುಂಪೊಂದು ಸಂಸತ್ ದಾಳಿಯ ರೂವಾರಿ ಅಫ್ಝಲ್ ಗುರು ಪರ ಮತ್ತು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿತ್ತು ಎಂದು ಆರೋಪಿಸಲಾಗಿದೆ.
ಸಂಸತ್ ದಾಳಿ ಪ್ರಕರಣದಲ್ಲಿ ಬಿಡುಗಡೆ ಗೊಂಡಿರುವ ಗೀಲಾನಿ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ದೇಶದ್ರೋಹ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ(ಹೊಸದಿಲ್ಲಿ) ಜತಿನ್ ನರ್ವಾಲ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.