ದುಬಾರಿ ಸ್ಮಾರ್ಟ್ ಫೋನ್ ಗಳಿಂದ ' ಫ್ರೀಡಂ ' ? 251 ರೂ.ನ ಮೊಬೈಲ್ನಲ್ಲಿ ಏನೇನಿದೆ ?
ನವದೆಹಲಿ: ವಿಶ್ವದ ಅತ್ಯಂತ ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆಗೆ ಭಾರತೀಯ ಕಂಪನಿ ಸಜ್ಜಾಗಿದೆ.ನೋಯ್ಡ ಮೂಲದ ರಿಂಗಿಂಗ್ ಬೆಲ್ ಕಂಪನಿ ಫ್ರೀಡಂ-251 ಬಿಡುಗಡೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಹೌದು ಇದರ ಬೆಲೆ ಕೇವಲ 251 ರೂಪಾಯಿ. ಕಂಪನಿಯ ವೆಬ್‌ಸೈಟ್‌ನಲ್ಲಿ ಗುರುವಾರ (ಫೆ. 18) ಮುಂಜಾನೆ 6ರಿಂದ ಇದರ ಮಾರಾಟ ಆರಂಭವಾಗಲಿದ್ದು, ಫೆಬ್ರವರಿ 21ರ ರಾತ್ರಿ 8ಕ್ಕೆ ಮಾರಾಟ ಅಂತ್ಯವಾಗುತ್ತದೆ.
ಅದು ಯಶಸ್ವಿಯಾಗಬಹುದೇ? ನಮಗಿನ್ನೂ ತಿಳಿಯದು. ಆದರೆ ನಾವು ತಿಳಿದಿರುವುದು ಈ ಕೆಳಗಿನ ಹತ್ತು ಅಂಶಗಳು:
1. ಈ ಫೋನ್ ಇತ್ತೀಚಿನ ಆಂಡ್ರಾಯ್ಡಾ ಲಾಲಿಪಾಪ್ 5.1 ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಬಹುತೇಕ ಎಲ್ಲ ಆಪ್‌ಗಳನ್ನು ಧಾರಣೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಕಿಟ್‌ಕ್ಯಾಟ್‌ಗಿಂತ ಸುಧಾರಿತ ಅವತರಣಿಕೆಯಾಗಿದ್ದು, 1.3 ಗಿಗಾಹರ್ಟ್ಸ್ ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದೆ.
2. ಇದು ಮಿಂಚಿನ ವೇಗದ ವೆಬ್ ಬ್ರೌಸಿಂಗ್‌ಗಾಗಿ 3ಜಿಗೆ ಅನುಕೂಲಕರವಾಗಿದೆ.
3. ಇದು ನಾಲ್ಕು ಇಂಚಿನ ಸ್ಕ್ರೀನ್ ಹೊಂದಿದ್ದು, ಇದು 5000 ರೂಪಾಯಿ ಬೆಲೆಯ ಫೋನ್‌ಗಳಷ್ಟೇ ಗಾತ್ರ ಹೊಂದಿದೆ.
4. ಇದು ಒಂದು ಜಿಬಿ ರ್ಯಾಮ್ ಒಳಗೊಂಡಿದ್ದು, ವಾಟ್ಸಪ್, ಫೇಸ್‌ಬುಕ್, ಟ್ವಿಟ್ಟರ್ ಹಾಗೂ ಇತರ ಆಪ್‌ಗಳನ್ನು ಅಳವಡಿಸಿಕೊಳ್ಳಲು ಸ್ಥಳಾವಕಾಶ ಹೊಂದಿದೆ.
5. ಇದು 8ಜಿಬಿ ಅಂತರ್ಗತ ಮೆಮೊರಿ ಹೊಂದಿದ್ದು, ಇದನ್ನು 32 ಜಿಬಿವರೆಗೂ ಮೈಕ್ರೊ ಎಸ್‌ಡಿ ಕಾರ್ಡ್ ಸಹಾಯದಿಂದ ವಿಸ್ತರಿಸಬಹುದು. ಆದರೆ ಮೈಕ್ರೊ ಎಸ್‌ಡಿ ಕಾರ್ಡ್ ಈ ಫೋನ್‌ಗಿಂತ ದುಬಾರಿ.
6. ಇದರಲ್ಲಿ ನೀವು ಎರಡೂ ಬದಿಗಳಲ್ಲಿ ಕ್ಯಾಮೆರಾ ಕೂಡಾ ಹೊಂದಿರುತ್ತೀರಿ. ಹಿಂಬದಿ 3.2 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದರೆ, ಮುಂದುಗಡೆ 0.3 ಮೆಗಾಪಿಕ್ಸೆಲ್ ಕ್ಯಾಮರಾ ಅಳವಡಿಸಲಾಗಿದೆ.
7. ಈ ಫೋನ್‌ನಲ್ಲಿ 1450 ಎಂಎಎಚ್ ಬ್ಯಾಟರಿ ಅಳವಡಿಸಲಾಗಿದ್ದು, ಇದು ಒಂದು ದಿನವೂ ಬಾಳಿಕೆ ಬಾರದು. ಆದರೆ ಬೆಲೆಯ ಹಿನ್ನೆಲೆಯಲ್ಲಿ ಯಾರೂ ಇದನ್ನು ಆಕ್ಷೇಪಿಸುವಂತಿಲ್ಲ.
8. ಇದರ ಚಾಲನಾ ಸಮಾರಂಭ ನವದೆಹಲಿಯಲ್ಲಿ ನಡೆಯಲಿದ್ದು, ಸಂಸದ ಮುರಳಿ ಮನೋಹರ ಜೋಶಿ, ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಭಾಗವಹಿಸುವರು.
9. ಇದರಲ್ಲಿ ಮಹಿಳೆಯರು, ರೈತರು, ಮೀನುಗಾರರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವ ಕೆಲ ಆಪ್‌ಗಳನ್ನು ಮೊದಲೇ ಅಳವಡಿಸಲಾಗಿದೆ. ಮಹಿಳಾ ಸುರಕ್ಷೆ, ಸ್ವಚ್ಛಭಾರತ, ಮೀನುಗಾರರು, ರೈತರು, ವೈದ್ಯಕೀಯ, ಗೂಗಲ್ ಪ್ಲೇ, ವಾಟ್ಸಪ್, ಫೇಸ್‌ಬುಕ್, ಯು ಟ್ಯೂಬ್‌ಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
10. ಒಂದು ವರ್ಷದ ವಾರಂಟಿ ಕೂಡಾ ಲಭ್ಯವಿದೆ. ದೇಶಾದ್ಯಂತ 650 ಸೇವಾ ಕೇಂದ್ರಗಳ ಹಿನ್ನೆಲೆಯಲ್ಲಿ ಕಂಪನಿ ಹೊಂದಿದೆ.
ಹೇಗೆ ಅಗ್ಗ?
ಅದು ಮಾತ್ರ ಇದುವರೆಗೂ ಗೊತ್ತಾಗಿಲ್ಲ. ಆದರೆ ಇದಕ್ಕೆ ಸರ್ಕಾರ ಸಬ್ಸಿಡಿ ನೀಡಿರಬೇಕು ಎಂದು ಅಂದಾಜಿಸಬಹುದು. ಏಕೆಂದರೆ ಅದು ಈಗಾಗಲೇ ಕೆಲ ಸರ್ಕಾರಿ ಆಪ್‌ಗಳನ್ನು ಅಳವಡಿಸಿಕೊಂಡಿದೆ.
ಮರೆಯಬೇಡಿ. ಗುರುವಾರ ಬೇಗನೇ ಎದ್ದು ನಿಮ್ಮ ಸಾಧನ ಕಾಯ್ದಿರಿಸಿ. ಕನಿಷ್ಠ ಅರ್ಧ ಡಜನ್!