×
Ad

ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲು ಸಂಪುಟದ ಶಿಫಾರಸು

Update: 2016-02-17 18:59 IST

ಹೊಸದಿಲ್ಲಿ,ಫೆ.17: ಅರುಣಾಚಲ ಪ್ರದೇಶದಲ್ಲಿ ಜ.26ರಂದು ಹೇರಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಹಿಂಪಡೆಯಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯು ಶಿಫಾರಸು ಮಾಡಿದೆ. ರಾಜ್ಯದಲ್ಲಿ ನೂತನ ಸರಕಾರಕ್ಕೆ ಪ್ರಮಾಣ ವಚನವನ್ನು ಬೋಧಿಸದಂತೆ ರಾಜ್ಯಪಾಲರನ್ನು ನಿರ್ಬಂಧಿಸಲು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ನಿರಾಕರಿಸಿತ್ತು.

 ಕಾಂಗ್ರೆಸ್ ಬಂಡುಕೋರ ಕಾಲಿಖೊ ಪುಲ್ ನೇತೃತ್ವದಲ್ಲಿ 31 ಶಾಸಕರು ಸೋಮವಾರ ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದಲ್ಲಿ ಮುಂದಿನ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದರು. 19 ಬಂಡಾಯ ಕಾಂಗ್ರೆಸ್,11 ಬಿಜೆಪಿ ಮತ್ತು ಇಬ್ಬರು ಪಕ್ಷೇತರ ಶಾಸಕರು ಪುಲ್ ಜೊತೆಯಲ್ಲಿದ್ದರು. ಇದರಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ನೂತನ ಸರಕಾರ ರಚನೆಗೆ ಅವಕಾಶ ನೀಡದಂತೆ ಮತ್ತು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶ ಕೋರಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.

ಆದರೆ ಅರುಣಾಚಲ ಪ್ರದೇಶದಲ್ಲಿ ನೂತನ ಸರಕಾರಕ್ಕೆ ಪ್ರಮಾಣ ವಚನ ಬೋಧಿಸದಂತೆ ರಾಜ್ಯಪಾಲರಿಗೆ ನಿರ್ಬಂಧ ವಿಧಿಸಿ ಮಧ್ಯಾಂತರ ಆದೇಶವನ್ನು ಹೊರಡಿಸಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿತ್ತು.

ಪುಲ್ ನೇತೃತ್ವದಲ್ಲಿ ಕಾಂಗ್ರೆಸ್ ಭಿನ್ನಮಮತೀಯ ಶಾಸಕರ ಬಂಡಾಯ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಅಂತಿಮವಾಗಿ ಜ.26ರಂದು ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News