ಎರಡು ವರ್ಷದ ಮಗುವಿಗೆ ಮದುವೆ ಮಾಡುತ್ತಿದ್ದಾಗ ಪೊಲೀಸರು ನಿದ್ರಿಸುತ್ತಿದ್ದರು!
ಜೈಪುರ, ಫೆ.27: ಭಾರತದಲ್ಲಿ ಬಾಲ್ಯವಿವಾಹ ಪದ್ಧತಿ ಇನ್ನೂ ಜೀವಂತವಾಗಿದೆ ಎನ್ನಲು ಇಲ್ಲಿದೆ ತಾಜಾ ನಿದರ್ಶನ. ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಗಜುನಾ ಹಳ್ಳಿಯಲ್ಲಿ ಎರಡ ರಿಂದ 12 ವರ್ಷ ವಯಸ್ಸಿನ ನಾಲ್ವರು ಬಾಲಕಿಯರು ವಿವಾಹವಾಗಿದ್ದಾರೆ.
ಫೆ.23 ರಂದು ಮದನ್ ನಾಥ್ ಕುಟುಂಬದ ಬಾಲ್ಯ ವಿವಾಹ ರಹಸ್ಯವಾಗಿ ನಡೆದಿತ್ತು. ವಿವಾಹದ ಬಗ್ಗೆ ಮಾಧ್ಯಮ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿತ್ತು.
ಊರೆಲ್ಲಾ ಸುದ್ದಿಯಾದ ಬಳಿಕ ಎಚ್ಚೆತ್ತ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲ್ಯ ವಿವಾಹ ನಡೆದ ಗಜುನಾ ಹಳ್ಳಿಗೆ ತೆರಳಿ ಹಿರಿಯರ ಕಟ್ಟುಪಾಡಿಗೆ ಸಿಲುಕಿ ವಿವಾಹಬಂಧನಕ್ಕೆ ಒಳಗಾದ ಏನೂ ಅರಿಯದ ಬಾಲಕಿಯರು ಹಾಗೂ ಅವರನ್ನು ವಿವಾಹವಾಗಿರುವ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಮಾಧ್ಯಮ ವರದಿಯನ್ನಾಧರಿಸಿ ವಿವಾಹದಲ್ಲಿ ಪಾಲ್ಗೊಂಡಿದ್ದ ಜನರ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದಾರೆ.
ತನ್ನ ಅಣ್ಣ ಹಾಗೂ ಅತ್ತಿಗೆ ಅಪ್ರಾಪ್ತ ಬಾಲಕಿಯರನ್ನು ಗುಟ್ಟಾಗಿ ವಿವಾಹ ಮಾಡಿದ್ದಾರೆ ಎಂದು ಬಾಲಕಿಯರ ಚಿಕ್ಕಪ್ಪ ಕುಪಾ ರಾವಲ್ ಭಿಲ್ವಾರದ ರಾಜಸ್ಥಾನ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರು.
ದೂರಿನ ಮೇರೆಗೆ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಸಮಿತಿಯು ಭಿಲ್ವಾರ ಎಸ್ಪಿ ಪ್ರದೀಪ್ ಮೋಹನ್ ಶರ್ಮಗೆ ಪತ್ರ ಬರೆದು ವಿಷಯ ತಿಳಿಸಿದ್ದರು.