ಧರ್ಮಶಾಲಾ ಪಾಕ್ ಇಂಡಿಯಾ ಟಿ-20 ಮ್ಯಾಚ್ ಮತ್ತೆ ಕಗ್ಗಂಟಾಗುವತ್ತ: ಬಿಸಿಸಿಐಗೆ ಎಚ್ಚರಿಕೆ ರವಾನಿಸಿದ ಮುಖ್ಯಮಂತ್ರಿ!
ಶಿಮ್ಲಾ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಧರ್ಮಶಾಲಾದಲ್ಲಿ ಭಾರತ-ಪಾಕಿಸ್ತಾನ ಟಿ-20 ಕ್ರಿಕೆಟ್ ಮ್ಯಾಚ್‌ನ್ನು ಆಯೋಜಿಸುತ್ತಿರುವ ಬಿಸಿಸಿಐ ಸ್ವಯಂ ತಾನೆ ಸಂಪೂರ್ಣ ಹೊಣೆಯನ್ನು ಹೊತ್ತುಕೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷವು ಧರ್ಮಶಾಲಾದಲ್ಲಿ ಕ್ರಿಕೆಟ್ ಮ್ಯಾಚ್ ನಡೆಸುವುದರ ಪರವಾಗಿಲ್ಲ. ಈ ಕುರಿತು ಶಾಸಂಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗುವುದು. ಈ ನಿರ್ಣಯವನ್ನು ತಾನು ಮೀರಲಾರೆ ಎಂದು ವೀರಭದ್ರ ಸಿಂಗ್ ತಿಳಿಸಿದ್ದಾರೆ. ಪಠಾಣ್ ಕೋಟ್ ಮತ್ತು ಜಮ್ಮುಕಾಶ್ಮೀರದಲ್ಲಿ ಈಗ ನಡೆಯುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಯಾರೂ ಕೂಡ ಧರ್ಮಶಾಲಾದಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬೇಕೆಂದು ಬಯಸಲಾರರು ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿ ವಿಧಾನಭಾ ಪರಿಸರದಲ್ಲಿ ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತಾಡುತ್ತಾ ತಾನು ಕಾಂಗ್ಡಾ ಪ್ರವಾಸ ಹೋಗಿದ್ದಾಗ ಜನರು ಕ್ರಿಕೆಟ್ ಮ್ಯಾಚನ್ನು ವಿರೋಧಿಸಿದ್ದರು ಎಂದು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯ ಲ್ಲಿ ಮ್ಯಾಚ್‌ನ್ನು ರದ್ದು ಪಡಿಸಬೇಕಾಗಿದೆ. ಸಾರಿಗೆ ಸಚಿವ ಜಿ.ಇ.ಎಸ್ ಬಾಲಿ ಕ್ರಿಕೆಟ್ ಪಂದ್ಯವನ್ನು ಬಲವಾಗಿ ವಿರೋಧಿಸುತ್ತಿದ್ದಾರಲ್ಲ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದಾಗ "ಅವರು ಮಾತ್ರವಲ್ಲ ಇಡೀ ಶಾಸಕಾಂಗವೇ ಕ್ರಿಕೆಟ್ ಮ್ಯಾಚ್ ವಿರುದ್ಧವಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಸರಕಾರ ಯಾವತ್ತೂ ಜನರ ಭಾವನೆಗಳ ವಿರುದ್ಧ ವರ್ತಿಸುವುದಿಲ್ಲ ಎಂದೂ ವೀರಭದ್ರ ಸಿಂಗ್ ಈ ಸಂದರ್ಭದಲ್ಲಿ ಹೇಳಿದ್ದಾರೆ.