×
Ad

ಪಂಜಾಬ್:ಸಿದ್ದು ಕುಟುಂಬ ಮುಂದಿಟ್ಟು ಅಕಾಲಿದಳ ವಿರುದ್ಧ ಒತ್ತಡ ತಂತ್ರಕ್ಕಿಳಿದಿರುವ ಬಿಜೆಪಿ!

Update: 2016-02-27 11:55 IST

ಜಲಂಧರ್: ಮಾಜಿ ಸಂಸದ ನವಜೋತ್ ಸಿಂಗ್ ಸಿದ್ದು ಪತ್ನಿ ನವಜೋತ್‌ಕೌರ್ ಅಕಾಲಿ ದಳದ ವಿರುದ್ಧ ನಡೆಸುತ್ತಿರುವ ಟೀಕಾಪ್ರಹಾರದಿಂದಾಗಿ ಪಂಜಾಬ್‌ನಲ್ಲಿ ರಾಜಕೀಯ ಸಮೀಕರಣದಲ್ಲಿ ಮತ್ತೆ ಬದಲಾವಣೆಗೋಚರಿಸಲಾರಂಭವಾಗಿದೆ. ನವಜೋತ್ ಕೌರ್ ಸ್ವಲ್ಪಕಾಲ ಸುಮ್ಮನಿದ್ದು ಮತ್ತೆ ಅಕಾಲಿದಳ ವಿರುದ್ಧ ಮಾತಾಡಲಾರಂಭಿಸಿದ್ದು ಇದರಿಂದಾಗಿ ಬಿಜೆಪಿ ಹಾಗೂ ಸಿದ್ದು ಕುಟುಂಬ ಬೇರೆಯೇ ಚುನಾವಣಾ ತಂತ್ರವನ್ನು ಪಂಜಾಬ್‌ನಲ್ಲಿ ಪ್ರಯೋಗಿಸಲು ಹೊರಟಿದೆ ಎಂಬುದು ವ್ಯಕ್ತವಾಗುತ್ತಿದೆ.

      ಅಕಾಲಿದಳ ನಾಯಕ ಮನ್‌ಜೀತ್ ಸಿಂಗ್‌ರು ದಿಲ್ಲಿಯಿಂದ ಚಂಡೀಗಡಕ್ಕೆ ಬಂದು 1984ರ ದಂಗೆಯನ್ನು ಮುಂದಿಟ್ಟು ಮೋದಿ ಸರಕಾರವನ್ನು ಟೀಕಿಸಿದ್ದರು. ಇದು ಬಿಜೆಪಿಯನ್ನು ಕೆರಳಿಸಿತ್ತು ಮತ್ತು ಅಕಾಲಿದಳದೊಂದಿಗೆ ರಾಜಕೀಯ ಘರ್ಷಣೆಗೆ ನಾಂದಿಯಾಯಿತು. ಮನ್ ಜೀತ್ ಸಿಂಗ್‌ರಿಗೆ ಈ ಮಾತನ್ನು ಚಂಡಿಗಡಕ್ಕೆ ಬಂದು ಹೇಳಬೇಕಾಗಿರಲಿಲ್ಲ. ದಿಲ್ಲಿಯಲ್ಲಿ ಕುಳಿತೇ ಅವರು ಹೇಳಬಹುದಾಗಿತ್ತು ಎಂದು ರಾಜಕೀಯ ಮೂಲಗಳು ಅಭಿಪ್ರಾಯಿಸಿವೆ. ಇದಾದ ನಂತರ ನವಜೋತ್ ಕೌರ್ ಅಕಾಲಿದಳ ವಿರುದ್ಧ ಧಾಳಿಗಿಳಿದಿದ್ದಾರೆ. ಬಹುಶಃ ಬಿಜೆಪಿಯ ಆದೇಶದ ಮೇರೆಗೆ ಕೌರ್ ಅಕಾಲಿದಳವನ್ನು ಟೀಕಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಂಜಾಬ್‌ನಲ್ಲಿ ಅಕಾಲಿದಳದೊಂದಿಗೆ ಮೈತ್ರಿ ಬೆಳೆಸಿ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಬಯಸುತ್ತಿದೆ. 23 ಸ್ಥಾನಗಳಿಗೆ ಅಕಾಲಿದಳದೊಂದಿಗೆ ಹೊಂದಾಣಿಕೆ ಮಾಡಲು ಈಗ ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವಾದ ಬಿಜೆಪಿಗೆ ಮನಸ್ಸಿಲ್ಲ ಎನ್ನಲಾಗುತ್ತಿದೆ.

 ಮೂಲಗಳು ತಿಳಿಸಿರುವಂತೆ ಕೇಂದ್ರೀಯ ಬಿಜೆಪಿ ನಾಯಕತ್ವ ಸಿದ್ದು ಕುಟುಂಬದ ಮೂಲಕ ಅಕಾಲಿದಳದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದೆ. ಸಿದ್ದು ಕುಟುಂಬವನ್ನು ಸುಮ್ಮನಾಗಿಸುವಂತೆ ಅಕಾಲಿದಳ ಬಿಜೆಪಿಯ ಕಾಲಬುಡಕ್ಕೆ ತೆರಳಿದಾಗ ಹೆಚ್ಚು ಸೀಟು ಹೊಂದಾಣಿಕೆ ವಿಚಾರ ಪ್ರಸ್ತಾಪಿಸಬಹುದೆಂಬ ಬಿಜೆಪಿಯ ತಂತ್ರಗಾರಿಕೆ ಇದೆಂದು ಮೂಲಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ದಯನೀಯ ಸೋಲನುಭವಿಸಿದ್ದರಿಂದ ಬಿಜೆಪಿಯಲ್ಲಿ ಆತ್ಮವಿಶ್ವಾಸ ಕುಂದಿದೆ ಹೀಗಾಗಿ ಬಿಜೆಪಿಯ ರಾಜಕೀಯ ಲೆಕ್ಕಾಚಾರ ಬದಲಾಗಿದೆ. ಪಂಜಾಬ್‌ನಲ್ಲಿ ಬಿಜೆಪಿ ಪ್ರತ್ಯೇಕವಾಗಿ ಚುನಾವಣೆಗೆ ನಿಲ್ಲಲು ಬಯಸಿತ್ತು. ಆದರೆ ಈಗ ಸುಮಾರ 40 ಸೀಟುಗಳ ಹೊಂದಾಣಿಕೆ ಅಕಾಲಿದಳದೊಂದಿಗೆ ಮಾಡಿಕೊಳ್ಳುವ ತಂತ್ರಗಾರಿಕೆಗಿಳಿದಿದೆ. ಇದರ ಅಂಗವಾಗಿ ನವಜೋತ್ ಕೌರ್ ಅಕಾಲಿದಳಕ್ಕೆ ತಲೆನೋವು ಸೃಷ್ಟಿಸುವ ಹೇಳಿಕೆಗಳೊಂದಿಗೆ ವಿಜೃಂಭಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News