ಕಳೆದುಹೋದ 3000 ಅಮೆರಿಕನ್ ಡಾಲರ್ ನ್ನು ಭಾರತೀಯನಿಗೆ ಮರಳಿಸಿ ಪ್ರಾಮಾನಿಕತೆ ಮೆರೆದ ಜಪಾನಿ ಪ್ರಜೆ
ನವದೆಹಲಿ,ಫೆ27: ಏಷ್ಯಾ ಖಂಡದ ಪ್ರಬಲ ರಾಷ್ಟ್ರಗಳೆಂದು ಪರಿಗಣಿತವಾದ ಭಾರತ ಹಾಗೂ ಜಪಾನ್ ನಡುವಣ ಸಂಬಂಧಗಳು ರಾಜತಾಂತ್ರಿಕ ಮಟ್ಟದಲ್ಲಿ ಸಾಕಷ್ಟು ಸುಧಾರಿಸಿವೆ. ಆದರೆ ವೈಯಕ್ತಿಕ ಮಟ್ಟದಲ್ಲಿಯೂ ಈ ಸಂಬಂಧಗಳು ಸುಧಾರಿಸುತ್ತಿವೆ ಹಾಗೂ ಸುಧಾರಿಸಿವೆಯೆಂಬುದಕ್ಕೆ ಇಲ್ಲಿದೆ ಒಂದು ಅತ್ಯುತ್ತಮ ದೃಷ್ಟಾಂತ.
ಜನವರಿ 12ರಿಂದ 14ರ ತನಕ ಜಪಾನ್ ರಾಜಧಾನಿ ಟೋಕಿಯೋದಲ್ಲಿ 8ನೇ ಭಾರತ-ಜಪಾನ್ ಎನರ್ಜಿ ಸಭೆ ಯಶಸ್ವಿಯಾಗಿ ನಡೆದಿತ್ತು. ಇದಾದ ನಂತರ, ಅಂದರೆ ಜನವರಿ 19ರಂದು ಅಲ್ಲಿನ ಭಾರತೀಯ ದೂತಾವಾಸ ಕಚೇರಿಗೆ ಮಸಾಟೋ ಹಿರಾಮೋಟೋ ಎಂಬ ಜಪಾನೀಯ ಬರೆದ ಪತ್ರವೊಂದು ತಲುಪಿತ್ತು. ತಾನು ಸಭೆಯ ಸಂದರ್ಭದೊರೆತ ಹಲವಾರು ಭಾರತೀಯ ಕಂಪೆನಿಗಳ ಕೈಪಿಡಿಗಳನ್ನು ಪರಿಶೀಲಿಸುತ್ತಿದ್ದಾಗ ಅದರ ನಡುವೆ 3000 ಅಮೆರಿಕನ್ ಡಾಲರ್ ಇದ್ದ ಪ್ಯಾಕೆಟ್ ಒಂದು ಪತ್ತೆಯಾಗಿತ್ತೆಂದೂ ಅದರ ವಾರಿಸುದಾರರನ್ನು ಪತ್ತೆ ಹಚ್ಚಿ ಅದನ್ನು ಅವರಿಗೆ ಹಿಂದಿರುಗಿಸಬೇಕೆಂದೂ ಪತ್ರದಲ್ಲಿ ಬರೆದಿತ್ತು.
ಆ ವ್ಯಕ್ತಿಯ ಪ್ರಾಮಾಣಿಕತೆಯನ್ನು ಮೆಚ್ಚಿದ ದೂತಾವಾಸ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ಕೇಳಿದ್ದರು. ಹಿರಾಮೊಟೋ ನೀಡಿದ ಮಾಹಿತಿಯಂತೆ ಟೋಕಿಯೋದಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಕಂಪೆನಿಗಳ ವಿವರಗಳನ್ನು ಪರಿಶೀಲಿಸಿ ಕೊನೆಗೆ ಈ ಹಣವು ಎಫ್‌ಐಇಎಂ ಇಂಡಸ್ಟ್ರೀಸ್ ಇದರ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಜೆ.ಕೆ.ಜೈನ್ ಅವರದ್ದೆಂದು ಪತ್ತೆ ಹಚ್ಚಲಾಯಿತು.
ಜೆ.ಕೆ.ಜೈನ್ ಅವರನ್ನು ಸಂಪರ್ಕಿಸಿದಾಗ ಆ ಹಣ ಅವರದ್ದೇ ಎಂದು ದೃಢ ಪಟ್ಟಿತ್ತು. ಪರಿಶೀಲನೆಗಳ ನಂತರ ಹಣವನ್ನು ಟೋಕಿಯೋದಲ್ಲಿರುವ ಕಂಪೆನಿಯ ಪ್ರತಿನಿಧಿ ಸುಜನ್ ಆರ್.ರಾಯ್‌ರವರಿಗೆ ಜಪಾನಿನ ಭಾರತೀಯ ರಾಯಭಾರಿಯವರು ಫೆ. 23ರಂದು ಹಸ್ತಾಂತರಿಸಿದರು.