×
Ad

ಒಂದು ಕೋ.ರೂ.ಗೂ ಅಧಿಕ ತೆರಿಗೆ ಸುಸ್ತಿದಾರರ ಹೆಸರುಗಳ ಬಹಿರಂಗಕ್ಕೆ ಸರಕಾರದ ಚಿಂತನೆ

Update: 2016-02-27 23:31 IST

 ಹೊಸದಿಲ್ಲಿ,ಫೆ.27: ಒಂದು ಕೋಟಿ ರೂ.ಗೂ ಅಧಿಕ ಆದಾಯ ತೆರಿಗೆಯನ್ನು ಬಾಕಿಯುಳಿಸಿಕೊಂಡಿರುವವರ ಹೆಸರುಗಳನ್ನು ಬಹಿರಂಗಗೊಳಿಸುವ ಪ್ರಸ್ತಾವನೆಯೊಂದನ್ನು ಸರಕಾರವು ಪರಿಶೀಲಿಸುತ್ತಿದೆ ಎಂದು ಸಹಾಯಕ ವಿತ್ತಸಚಿವ ಜಯಂತ ಸಿನ್ಹಾ ಅವರು ಶುಕ್ರವಾರ ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ಇದು ಐದು ಕೋ.ರೂ.ಮತ್ತು ಅದಕ್ಕೂ ಹೆಚ್ಚಿನ ಸುಸ್ತಿದಾರರಿಗೆ ಸೀಮಿತವಾಗಿದೆ.

ಇದರೊಂದಿಗೆ ಸರಕಾರವು ಒಟ್ಟೂ 1,152.52 ಕೋ.ರೂ.ತೆರಿಗೆ ಬಾಕಿಯುಳಿಸಿಕೊಂಡಿರುವ 18 ಸುಸ್ತಿದಾರರ ಹೆಸರುಗಳನ್ನು ಬಹಿರಂಗಗೊಳಿಸಿದೆ.

 ಈ ಪೈಕಿ ದಿ.ಉದಯ ಆಚಾರ್ಯ 779.04 ಕೋ.ರೂ.ಗಳ ಅತ್ಯಂತ ಹೆಚ್ಚಿನ ತೆರಿಗೆ ಬಾಕಿಯನ್ನುಳಿಸಿದ್ದಾರೆ. ನೆಕ್ಸೊಫ್ಟ್ ಇಂಡಿಯಾ ಲಿ. 68.21ಕೋ.,ಲಿವರ್‌ಪೂಲ್ ಇಂಡಿಯಾ ಲಿ.32.16ಕೋ.ರೂ.ಮತ್ತು ಜಶುಭಾಯಿ ಜ್ಯುವೆಲರ್ಸ್ 32.13 ಕೋ.ರೂ.ಬಾಕಿಯನ್ನುಳಿಸಿಕೊಂಡಿವೆ.

ಪ್ರಫುಲ್ ಅಖಾನಿ(29.11ಕೋ.ರೂ), ಸಾಕ್ಷಿ ಎಕ್ಸ್‌ಪೋರ್ಟ್ಸ್(26.76 ಕೋ.ರೂ.), ಹೇಮಂಗ ಸಿ.ಶಾ(22.51 ಕೋ.ರೂ), ಮೊಹಮ್ಮದ್ ಹಾಜಿ ಅಲಿಯಾಸ್ ಯೂಸುಫ್ ಮೋಟರ್‌ವಾಲಾ(22.34 ಕೋ.ರೂ.), ಧರ್ಣೇಂದ್ರ ಓವರ್‌ಸೀಸ್ ಲಿ.(19.87 ಕೋ.ರೂ) ಮತ್ತು ಜಗ್ ಹೀಟ್ ಎಕ್ಸಪೋರ್ಟ್ಸ್ (18.45 ಕೋ.ರೂ.) ಇವರೂ ಸುಸ್ತಿದಾರರ ಪಟ್ಟಿಯಲ್ಲಿ ಸೇರಿದ್ದಾರೆ.

ಈ ಎಲ್ಲ ಸುಸ್ತಿದಾರರಿಂದ ಬಾಕಿಯಿರುವ ತೆರಿಗೆಯನ್ನು ವಸೂಲು ಮಾಡಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಸಿನ್ಹಾ ತಿಳಿಸಿದರು.

 ಸರಕಾರವು ಕೈಗೊಂಡಿರುವ ವಿವಿಧ ಉಪಕ್ರಮಗಳು,ಆರ್ಥಿಕ ಚಟುವಟಕೆ ಮತ್ತು ತೆರಿಗೆದಾತರಿಂದ ಉತ್ತಮ ಸ್ಪಂದನೆ ಇವುಗಳಿಂದಾಗಿ 2015-16ನೇ ಸಾಲಿನ ಎಪ್ರಿಲ್-ಜನವರಿ ಅವಧಿಯಲ್ಲಿ ದೇಶದ ನೇರ ತೆರಿಗೆ ಸಂಗ್ರಹ(5.22 ಲ.ಕೋ.ರೂ)ದಲ್ಲಿ ಶೇ.10.87ರಷ್ಟು ಮತ್ತು ಪರೋಕ್ಷ ತೆರಿಗೆ ಸಂಗ್ರಹ(5.69 ಲ.ಕೋ.ರೂ)ದಲ್ಲಿ ಶೇ.33.7ರಷ್ಟು ಏರಿಕೆಯಾಗಿವೆ ಎಂದು ಅವರು ಪ್ರತ್ಯೇಕ ಉತ್ತರದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News