ಮಲಯಾಳಂ ಚಿತ್ರ ನಿರ್ದೇಶಕ ರಾಜೇಶ ಪಿಳ್ಳೈ ನಿಧನ
Update: 2016-02-27 23:51 IST
ಕೊಚ್ಚಿ,ಫೆ.27: ಖ್ಯಾತ ಚಿತ್ರ ನಿರ್ದೇಶಕ ರಾಜೇಶ ಪಿಳ್ಳೈ(41) ಅವರು ಶನಿವಾರ ಬೆಳಗ್ಗೆ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹೊಸ ತಲೆಮಾರಿನ ಚಿತ್ರ ‘‘ಟ್ರಾಫಿಕ್’’ಸೇರಿದಂತೆ ಕೇವಲ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದ ಅವರು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದು, ಇಲ್ಲಿಯ ಪಿವಿಎಸ್ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಪಿಳ್ಳೈ ತನ್ನ ಇತ್ತೀಚಿನ ಚಿತ್ರ ‘‘ವೆಟ್ಟಾ’’ದ ಚಿತ್ರೀಕರಣ ಮುಗಿಸಿದ್ದ ಬೆನ್ನಿಗೇ ನ್ಯುಮೋನಿಯಾ ಸೋಂಕಿಗೊಳಗಾಗಿದ್ದು, ಇದು ಅವರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಿತ್ತು.
ಮಂಜು ವಾರಿಯರ್ ಮತ್ತು ಕುಂಞಾಕೊ ಬಬ್ಬನ್ ಪ್ರಮುಖ ಪಾತ್ರಗಳಲ್ಲಿರುವ ‘‘ವೆಟ್ಟಾ’’ ಶುಕ್ರವಾರವಷ್ಟೇ ಬಿಡುಗಡೆಗೊಂಡಿತ್ತು. ಪಿಳ್ಳೈ ಚಿಕಿತ್ಸೆಯಲ್ಲಿರುವಾಗಲೇ ಈ ಚಿತ್ರದ ಕಾರ್ಯ ಪೂರ್ಣಗೊಂಡಿತ್ತು. ಅವರ ಅಂತ್ಯಸಂಸ್ಕಾರವು ನಾಳೆ ಇಲ್ಲಿ ನಡೆಯಲಿದೆ.