ನೇತ್ರಾವತಿ ಸೇತುವೆ ದಾರಿದೀಪ ದುರಸ್ತಿ ಯಾವಾಗ?
ಮಂಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ಎಂದು ಗುರುತಿಸಲ್ಪಡುವ ನೇತ್ರಾವತಿ ಸೇತುವೆಯ ಈ ಮೊದಲು ಒಂದು ಸೇತುವೆ ಇದ್ದದ್ದು ಈಗ ಪುನಃ ಇನ್ನೊಂದು ಸೇತುವೆ ನಿರ್ಮಾಣವಾಗಿರುತ್ತದೆ. ಈ ಸೇತುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು ಮತ್ತು ರಾತ್ರಿ ಹಲವಾರು ಸಂಚಾರಿ ಬಸ್ಸುಗಳು, ಘನ ವಾಹನಗಳು ನಿತ್ಯ ಸಂಚರಿಸುತ್ತವೆ. ಹಾಗೂ ಸರಕು ಸಾಗಾಟದ ಕೇಂದ್ರ ಬಿಂದುವಾಗಿರುತ್ತದೆ. ಈ ಸೇತುವೆಯ ಮೇಲೆ ಈ ಹಿಂದೆ ರಾತ್ರಿ ಸಮಯದಲ್ಲಿ ಸುಮಾರು ಸೋಡಿಯಂ ದಾರಿ ದೀಪಗಳು ಉರಿಯುತ್ತಾ ಇದ್ದು ಸಾರ್ವಜನಿಕ ಸಂಚಾರಕ್ಕೆ ಹೆಚ್ಚು ನಿರ್ಭೀತಿಯಿಂದ ಸಂಚರಿಸಲು ಅನುಕೂಲವಾಗುತ್ತಾ ಇತ್ತು. ಈ ದಾರಿಯ ಮಧ್ಯೆ ಕೆಲವೊಮ್ಮೆ ವಾಹನಗಳು ಕೆಟ್ಟು ಹಾಳಾಗಿ ನಿಲ್ಲುತ್ತವೆ. ಅಲ್ಲದೆ ರಾತ್ರಿ ಹೊತ್ತು ವಾಹನಗಳಿಗೆ ತಡೆಯೊಡ್ಡಿ ಅಹಿತಕರ ಘಟನೆಗಳು ಮತ್ತು ಸುಲಿಗೆ ನಡೆದ ವದಂತಿಗಳು ಇದ್ದು ಈ ಕೃತ್ಯಗಳಿಗೆ ಈ ರಸ್ತೆಯ ಈ ಕತ್ತಲೆಯ ವಾತಾವರಣವು ಪೂರಕವಾಗಿರುತ್ತದೆ. ಒಂದು ಕಾಲದಲ್ಲಿ ಬಹಳ ಸಾರ್ವಜನಿಕ ಒತ್ತಡದಿಂದ ದಾರಿದೀಪ ಈ ಸೇತುವೆಗೆ ಒದಗಿ ಬಂದಿತ್ತು. ಈಗ ಹಲವಾರು ಸಮಯಗಳಿಂದ ಈ ದಾರಿದೀಪ ವ್ಯವಸ್ಥೆ ಹಾಳಾಗಿದ್ದು ನಿತ್ಯ ಸಂಚರಿಸುವವರಿಗೆ ತುಂಬಾ ಅನನುಕೂಲವಾಗಿರುತ್ತದೆ, ಈ ಬಗ್ಗೆ ಈ ಹಿಂದೆ ಸಂಬಂಧಪಟ್ಟವರಲ್ಲಿ ವೌಖಿಕವಾಗಿ ಹೇಳಿದರೂ ಪ್ರಯೋಜನವಾಗಿಲ್ಲ.
ಆದ್ದರಿಂದ ಗೌರವಾನ್ವಿತ ಮಹಾಪೌರರು, ಪೌರಾಯುಕ್ತರು ಈ ಬಗ್ಗೆ ಮುತುವರ್ಜಿ ವಹಿಸಿ ಈ ದಾರಿದೀಪದ ವ್ಯವಸ್ಥೆಯನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ನಾಗರಿಕರು ಆಗ್ರಹಿಸಿದ್ದಾರೆ.