×
Ad

ಶೇ.15 ಮೇಲ್ತೆರಿಗೆ ಒಂದು ಕೋಟಿ ರೂ. ಆದಾಯದವರಿಗೆ

Update: 2016-02-29 23:54 IST

  ಹೊಸದಿಲ್ಲಿ, ಫೆ.29: ಒಂದು ಕೋಟಿ ರೂ.ಗೂ ಅಧಿಕ ವಾರ್ಷಿಕ ಆದಾಯವನ್ನು ಹೊಂದಿರುವ ಅತಿಶ್ರೀಮಂತರಿಗೆ ವಿಧಿಸಲಾಗುವ ಮೇಲ್ತೆರಿಗೆಯನ್ನು ಕೇಂದ್ರ ಸರಕಾರವು ಸೋಮವಾರ ಶೇ. 15ಕ್ಕೆ ಏರಿಕೆ ಮಾಡಿದೆ.
  2016-17ನೆ ಸಾಲಿನ ಕೇಂದ್ರ ಬಜೆಟನ್ನು ಅನಾವರಣಗೊಳಿಸಿ ಮಾತನಾಡಿದ ವಿತ್ತಸಚಿವ ಅರುಣ್‌ಜೇಟ್ಲಿ, ಕಂಪೆನಿಗಳು, ಸಂಸ್ಥೆಗಳು ಹಾಗೂ ಸಹಕಾರ ಸಂಘಗಳನ್ನು ಹೊರತುಪಡಿಸಿ 1 ಕೋಟಿ ರೂ.ಗೂ ಅಧಿಕ ವಾರ್ಷಿಕ ಆದಾಯವಿರುವ ವ್ಯಕ್ತಿಗಳ ಮೇಲೆ ಶೇ.12ರಿಂದ ಶೇ.15ರಷ್ಟು ಸರ್ಚಾಜ್ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. ಆದಾಗ್ಯೂ ಪ್ರಸಕ್ತ ಆದಾಯ ತೆರಿಗೆಯ ಹಾಲಿ ಸ್ಲಾಬ್‌ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲವೆಂದು ಅವರು ತಿಳಿಸಿದ್ದಾರೆ. 2013-14ರ ಸಾಲಿನಲ್ಲಿ ಆಗಿನ ಹಣಕಾಸು ಸಚಿವರಾದ ಪಿ.ಚಿದಂಬರಂ 1 ಕೋಟಿ ರೂ. ಹಾಗೂ ಅದಕ್ಕಿಂತ ಅಧಿಕ ತೆರಿಗೆಯೋಗ್ಯ ಆದಾಯದ ಮೇಲೆ ಶೇ.10ರಷ್ಟು ಮೇಲ್ತೆರಿಗೆ ವಿಧಿಸಿದ್ದರು.
  ಸ್ವಂತ ಮನೆ ಹೊಂದಿರದೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ ಸಮಾಧಾನ ನೀಡುವಂತಹ ಕ್ರಮವೆಂಬಂತೆ ಸಚಿವ ಜೇಟ್ಲಿಯವರು ಮನೆಬಾಡಿಗೆ ತೆರಿಗೆ ವಿನಾಯಿತಿ ಮಿತಿಯನ್ನು 24 ಸಾವಿರ ರೂ.ಗಳಿಂದ 60 ಸಾವಿರ ರೂ.ಗೆ ಏರಿಕೆ ಮಾಡಿದ್ದಾರೆ.
ವಾರ್ಷಿಕವಾಗಿ 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರ ತೆರಿಗೆ ರಿಬೇಟ್ ಸೀಲಿಂಗನ್ನು 2 ಸಾವಿರ ರೂ.ಗಳಿಂದ 5 ಸಾವಿರ ರೂ.ಗೆ ಏರಿಸಲಾಗಿದೆ. ಇದರಿಂದಾಗಿ ್ಕಈ ಶ್ರೇಣಿಯ ಸುಮಾರು 2 ಕೋಟಿ ಮಂದಿ ತೆರಿಗೆ ಪಾವತಿದಾರರು ಸುಮಾರು 3 ಸಾವಿರ ರೂ.ವರೆಗೆ ತೆರಿಗೆ ರಿಯಾಯಿತಿಯನ್ನು ಪಡೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News