ಆಯುಷ್ ಹುದ್ದೆಗಳಿಗೆ ಮುಸ್ಲಿಮರ ನೇಮಕವಿಲ್ಲ!
ಹೊಸದಿಲ್ಲಿ,ಮಾ.11: ಮೋದಿ ಸರಕಾರದ ಆಯುಷ್ ಸಚಿವಾಲಯವು ತನ್ನ ಹುದ್ದೆಗಳಿಗೆ ಮುಸ್ಲಿಮರನ್ನು ನೇಮಕಗೊಳಿಸುವುದಿಲ್ಲವೆಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದೆ.ಅಷ್ಟೇ ಅಲ್ಲದೆ ಇದು ಸರಕಾರದ ನೀತಿಯಾಗಿದೆಯೆಂದು ಹೇಳುವ ಮೂಲಕ ದೇಶದ ಜಾತ್ಯತೀತ ಸ್ವರೂಪಕ್ಕೆ ಕೊಡಲಿಯೇಟು ನೀಡಿದೆ. ಕಳೆದ ವರ್ಷ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಆಯುಷ್ ಸಚಿವಾಲಯವು ವಿದೇಶಗಳಲ್ಲಿ ನಿಯೋಜಿಸಿದ ಮುಸ್ಲಿಂ ಯೋಗ ಶಿಕ್ಷಕರು ಹಾಗೂ ತರಬೇತುದಾರರ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಅದು ಹೀಗೆ ಉತ್ತರಿಸಿದೆ. ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ ಹಾಗೂ ಹೊಮಿಯೋಪಥಿಗೆ ಸಂಬಂಧಿಸಿದ ವ್ಯವಹಾರಗಳನ್ನು ಆಯುಷ್ ಸಚಿವಾಲಯ ನಿರ್ವಹಿಸುತ್ತಿದೆ.
ಖ್ಯಾತ ಪತ್ರಕರ್ತ ಪುಷ್ಪ್ ಶರ್ಮಾ ಅವರು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಸಲ್ಲಿಸಿದ ಅರ್ಜಿಯಲ್ಲಿ ಆಯುಷ್ ಇಲಾಖೆಯು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ವಿದೇಶದಲ್ಲಿ ನಿಯೋಜಿಸಿದ ಮುಸ್ಲಿಮ್ ಯೋಗ ತರಬೇತುದಾರರ ವಿವರಗಳನ್ನು ಕೋರಿದ್ದರು.
ಪುಷ್ಪ್ ಶರ್ಮಾ ಅವರ ವರದಿಯು ಮಿಲ್ಲಿ ಗೆಜೆಟ್‌ನ ಮುಂದಿನ ಸಂಚಿಕೆಯಲ್ಲಿ ಪ್ರಕಟವಾಗಲಿದೆ.
711 ಮಂದಿ ಮುಸ್ಲಿಮ್ ಯೋಗ ತರಬೇತುದಾರರು ವಿದೇಶದಲ್ಲಿ ಅಲ್ಪಾವಧಿಯ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರಲ್ಲಿ ಯಾರನ್ನೂ ಕೂಡಾ ನೇಮಕಾತಿ ಸಂದರ್ಶನಕ್ಕೆ ಆಹ್ವಾನಿಸಲಾಗಿರಲಿಲ್ಲ. ವಿದೇಶಕ್ಕೆ ಕಳುಹಿಸಲಾದ ಎಲ್ಲ 26 ಮಂದಿ ಯೋಗತರಬೇತುದಾರರು ಹಿಂದೂಗಳೆಂದು ಸಚಿವಾಲಯವು ತಿಳಿಸಿದೆ.
2015ರ ಅಕ್ಟೋಬರ್‌ವರೆಗೆ 3,841 ಮಂದಿ ಮುಸ್ಲಿಮರು ಯೋಗತರಬೇತುದಾರ/ಶಿಕ್ಷಕ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರಲ್ಲಿ ಯಾರನ್ನೂ ಕೂಡಾ ಆಯ್ಕೆ ಮಾಡಿಲ್ಲವೆಂದು ಆಯುಷ್ ತಿಳಿಸಿದೆ.
ಮುಸ್ಲಿಮ್ ಯೋಗ ಶಿಕ್ಷಕರ ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಆಯುಷ್ ಸಚಿವಾಲಯ ಕಾರಣವೂ ಅಸಂಬದ್ಧವಾಗಿದೆ. ‘‘ಸರಕಾರದ ನೀತಿಯ ಪ್ರಕಾರ, ಯಾವುದೇ ಮುಸ್ಲಿಮ್ ಅಭ್ಯರ್ಥಿಯನ್ನು ಆಹ್ವಾನಿಸಲಾಗಿಲ್ಲ, ಆಯ್ಕೆ ಮಾಡಲಾಗಿಲ್ಲ ಅಥವಾ ವಿದೇಶಕ್ಕೆ ಕಳುಹಿಸಲಾಗಿಲ್ಲ’’ ಎಂದು ಅದು ಹೇಳಿದೆ. ಭಾರತದೊಳಗೂ ಆಯುಷ್ ಸಚಿವಾಲಯವು ಯೋಗ ತರಬೇತಿದಾರ/ಶಿಕ್ಷಕ ಹುದ್ದೆಗಳಿಗೆ ಮುಸ್ಲಿಮರನ್ನು ಆಯ್ಕೆ ಮಾಡಿಲ್ಲವೆಂಬುದು ಈ ಆರ್‌ಟಿಐ ಉತ್ತರದಿಂದ ಸ್ಪಷ್ಟವಾಗಿದೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆ ಕೂಗುವ ಸರಕಾರದ ಆಡಳಿತದಲ್ಲಿ ಇಂತಹ ಶೋಚನೀಯ ಪರಿಸ್ಥಿತಿಯಿದೆಯೆಂದು ಶರ್ಮಾ ಆಘಾತ ವ್ಯಕ್ತಪಡಿಸಿದ್ದಾರೆ.
ಮೋದಿ ಸರಕಾರದ ಕೋಮುವಾದಿ ಕಾರ್ಯಸೂಚಿಯು ದೇಶದಲ್ಲಿ ಕೋಮುದ್ವೇಷವನ್ನು ಅಸಾಧಾರಣ ಮಟ್ಟಕ್ಕೆ ಒಯ್ದಿದೆ. ಸರಕಾರಿ ಕಾರಿಡಾರ್‌ಗಳಲ್ಲಿಯೂ ಕೋಮುವಾದ ತಲೆಯೆತ್ತಿದೆ. ಸರಕಾರದ ಹುದ್ದೆಗಳಲ್ಲಿ ಮುಸ್ಲಿಮರನ್ನು ನೇಮಕಗೊಳಿಸದೆ ಇರುವುದು ತನ್ನ ನೀತಿಯೆಂದು ಮೋದಿ ಸರಕಾರವು ಲಜ್ಜೆಗೆಟ್ಟು ಹೇಳುತ್ತಿದೆ. ಆರ್‌ಟಿಐ ಅರ್ಜಿಯಡಿ ದೊರೆತ ಉತ್ತರವು ಒಂದು ಸಣ್ಣ ಸಚಿವಾಲಯದ ನಿರ್ದಿಷ್ಟ ಯೋಜನೆಗೆ ಸಂಬಂಧಿಸಿದ್ದಾಗಿದೆ. ಆದರೆ ಈ ನೀತಿಯಿಂದ ಇಡೀ ಸರಕಾರದ ಮೇಲೆ ವ್ಯಾಪಕ ಪರಿಣಾಮ ಉಂಟಾಗುವ ಸಾಧ್ಯತೆಯೂ ಇದೆಯೆಂದು ಪುಷ್ಪ ಶರ್ಮಾ ಅಭಿಪ್ರಾಯಿಸುತ್ತಾರೆ.