×
Ad

ನನ್ನನ್ನು ಸದನದಿಂದ ಹೊರ ಹಾಕಿ : ಸರಕಾರಕ್ಕೆ ಆಝಾದ್ ಸವಾಲು

Update: 2016-03-14 20:31 IST

ಹೊಸದಿಲ್ಲಿ , ಮಾ. 14 : ಆರೆಸ್ಸೆಸ್ ಹಾಗು ಇಸ್ಲಾಮಿಕ್ ಸ್ಟೇಟ್ ಕುರಿತು ತಾನು ಮಾಡಿದ್ದೇನೆನ್ನಲಾದ ಹೋಲಿಕೆಗೆ ಸಂಬಂಧಿಸಿ ತನ್ನ ವಿರುದ್ಧ ನಿಲುವಳಿ ಸೂಚನೆ ತಂದು ಸದನದಿಂದ ಹೊರಹಾಕುವಂತೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಝಾದ್ ಕೇಂದ್ರ ಸರಕಾರಕ್ಕೆ ಸವಾಲು ಹಾಕಿದ್ದಾರೆ. ಸೋಮವಾರ ರಾಜ್ಯಸಭೆಯ ಕಲಾಪ್ ಆರಂಭವಾಗುತ್ತಿದ್ದಂತೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಈ ವಿಷಯವನ್ನು ಎತ್ತಿದರು. 
ರಾಷ್ಟ್ರೀಯವಾದಿಗಳ ಮೇಲೆ ದಾಳಿ ಮಾಡುವುದು ಹಾಗು ದೇಶದ್ರೋಹಿ ಶಕ್ತಿಗಳನ್ನು ಅಭಿನಂದಿಸುವುದು " ಪುರಾತನ ಪಕ್ಷದ ನೂತನ ಫಾರ್ಮುಲ " ಎಂದು ಆರೋಪಿಸಿದ ನಖ್ವಿ, ತನ್ನ ಹೇಳಿಕೆಗೆ ಆಝಾದ್  ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. 
ಆದರೆ ಇದಕ್ಕೆ ಜಗ್ಗದ ಆಝಾದ್ ತನ್ನ ಭಾಷಣದ ರೆಕಾರ್ಡಿಂಗ್ ಅನ್ನು ಸದನದ ಮುಂದಿಟ್ಟರು. ಹಾಗು ಅದರ ಇನ್ನೊಂದು ಪ್ರತಿಯನ್ನು ಸದನದ ನಾಯಕ ಅರುಣ್ ಜೇಟ್ಲಿಗೆ ಪರಿಶೀಲನೆಗೆ ಕೊಡುವುದಾಗಿ ಹೇಳಿದರು. ಅದರಲ್ಲಿ ಅಂತಹ ತಪ್ಪು ಕಂಡು ಬಂದರೆ ತನ್ನ ವಿರುದ್ಧ ನಿಲುವಳಿ ಸೂಚನೆ ತಂದು ಸದನದಿಂದ ಹೊರಹಾಕಿ ಎಂದು ಸವಾಲು ಹಾಕಿದರು. 

ತನ್ನ ಭಾಷಣವನ್ನು ಸಮರ್ಥಿಸಿಕೊಂಡ ಅವರು ತನ್ನ ವಿರುದ್ಧ  ಆರೋಪ ಮಾಡಲು ಬಳಸಿದ್ದ  ಸಾಲುಗಳನ್ನು ಮತ್ತೆ ಓದಿ ಹೇಳಿದರು. ಅದು ಹೇಗಿತ್ತು : " ನಾವು ಐಸಿಸ್ ಅನ್ನು ವಿರೋಧಿಸುತ್ತೇವೆ ಹಾಗೆ ಅಂತಹ ಇತರ ಸಂಘಟನೆಗಳನ್ನೂ ವಿರೋಧಿಸುತ್ತೇವೆ , ಆರೆಸ್ಸೆಸ್ ಅನ್ನು ವಿರೋಧಿಸಿದ ಹಾಗೆ ... ಇಸ್ಲಾಮಿನಲ್ಲೂ ನಾವು ಆರೆಸ್ಸೆಸ್ ನಂತೆ ವರ್ತಿಸುವವರನ್ನು ವಿರೋಧಿಸುತ್ತೇವೆ... ನಾವು ಹಿಂದೂ, ಸಿಖ್ ಹಾಗು ಮುಸ್ಲಿಂ ಮೂಲಭೂತವಾದಿಗಳನ್ನು ಸಮಾನವಾಗಿ ವಿರೋಧಿಸಬೇಕಾಗಿದೆ... ಇಂದು ಮೂಲಭೂತವಾದ ಹಾಗು ಜಾತ್ಯತೀತತೆ ನಡುವೆ ಯುದ್ಧವಿದೆ " . ಈ ಸಾಲುಗಳಲ್ಲಿ  ಆರೆಸ್ಸೆಸ್ ಹಾಗು ಐಸಿಸ್ ನಡುವೆ ಹೋಲಿಕೆ ಎಲ್ಲಿದೆ ಎಂದು ಅವರು ಕೇಳಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News