ಮಲ್ಯರನ್ನು ಮರಳಿ ತರದ ಸರಕಾರ ದಾವೂದ್‌ನನ್ನು ಹೇಗೆ ವಾಪಸ್ ತರುತ್ತದೆ?: ಶಿವಸೇನೆ ಪ್ರಶ್ನೆ
ಹೊಸದಿಲ್ಲಿ,ಮಾ.14: ಅಕ್ರಮ ಹಣ ವರ್ಗಾವಣೆ ಆರೋಪವನ್ನೆದುರಿಸುತ್ತಿರುವ ಮದ್ಯದ ದೊರೆ ವಿಜಯ ಮಲ್ಯರತ್ತ ಸರಕಾರದ ಮೃದು ಧೋರಣೆಯನ್ನು ಸೋಮವಾರ ತರಾಟೆಗೆತ್ತಿಕೊಂಡ ಶಿವಸೇನೆಯು, ಮಲ್ಯರನ್ನು ವಾಪಸ್ ತರಲು ಸಾಧ್ಯವಾಗದ ಸರಕಾರ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಹೇಗೆ ಮರಳಿ ಕರೆ ತರುತ್ತದೆ ಎಂದು ಪ್ರಶ್ನಿಸಿತು.
ಲಲಿತ್ ಮೋದಿ ಮತ್ತು ವಿಜಯ ಮಲ್ಯರಂತಹ ಜನರನ್ನು ದೇಶವನ್ನು ತೊರೆಯಲು ಅವಕಾಶ ನೀಡಿದ್ದಾದರೂ ಹೇಗೆ? ಅವರನ್ನು ಪತ್ತೆ ಹಚ್ಚಬಹುದಾದ ಹಲವಾರು ಸಂಸ್ಥೆಗಳನ್ನು ನಾವು ಜಾಗತಿಕವಾಗಿ ಹೊಂದಿದ್ದೇವೆ. ಇದು ವ್ಯವಸ್ಥೆಯ ವೈಫಲ್ಯವಾಗಿದ್ದು ಮಲ್ಯ ಎಷ್ಟು ಪ್ರಭಾವಶಾಲಿ ಎಂಬ ವಿಷಯವಲ್ಲ ಎಂದು ಇಲ್ಲಿ ಸುದ್ದಿಸಂಸ್ಥೆಯೊಡನೆ ಮಾತನಾಡಿದ ಶಿವಸೇನೆಯ ನಾಯಕ ಸಂಜಯ ರೌತ್ ಹೇಳಿದರು.
ಸರಕಾರವು ಈ ವಿಷಯದಲ್ಲಿ ಸಂಪೂರ್ಣ ಅಸಹಾಯಕವಾಗಿ ವರ್ತಿಸುತ್ತಿದೆ ಎಂದು ಒತ್ತಿ ಹೇಳಿದ ಅವರು,ಭಾರತೀಯ ಪ್ರಜೆಯನ್ನೇ ವಾಪಸ್ ಕರೆತರಲಾಗದ ಅದು ದಾವೂದ್‌ನನ್ನು ಮರಳಿ ಕರೆ ತರುವುದಾಗಿ ಕೊಚ್ಚಿಕೊಳ್ಳುತ್ತಿದೆ ಎಂದು ಛೇಡಿಸಿದರು.