ಉವೈಸಿ ನಾಲಗೆಗೆ 1 ಕೋಟಿ ರೂ. ಘೋಷಿಸಿದ್ದ ಬಿಜೆಪಿ ಮುಖಂಡನ ವಜಾ
ಉ.ಪ್ರ,ಮಾ.18 :ಆಲ್‌ಇಂಡಿಯ ಮಜ್ಲಿಸೆ ಇ ಇತ್ತಿಯಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸದುದ್ಧೀನ್ ಉವೈಸಿ ವಿರುದ್ಧ ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಕಾಶಿ ವಲಯ ಬಿಜೆಪಿ ಯುವ ಮೋರ್ಚದ ನಾಯಕನನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ಮತ್ತು ಪಕ್ಷದ ಪ್ರಾಥಮಿಕ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಬಿಜೆಪಿ ಹೇಳಿದೆ.
ಬಿಜೆಪಿ ಕಾಶಿ ವಲಯದ ಯವಮೋರ್ಚದ ಉಪಾಧ್ಯಕ್ಷ ಶ್ಯಾಮ್ ದ್ವಿವೇದಿ ಎಂಬಾತನನ್ನು ಪಕ್ಷದ ಉಪಾಧ್ಯಕ್ಷ ಸ್ಥಾನ ಮತ್ತು ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶದ ಪೂರ್ವಭಾಗದ ಬಿಜೆಪಿಯ ಮಾಧ್ಯಮ ಉಸ್ತುವಾರಿ ಸಂಜಯ್ ಭಾರದ್ವಾಜ್ ಗುರುವಾರ ವಾರಣಾಸಿಯಲ್ಲಿ ಹೇಳಿದ್ದಾರೆ.
ಪಕ್ಷದ ನಾಯಕರ ಆದೇಶದಂತೆ ಕಾಶಿ ವಲಯದ ಬಿಜೆಪಿ ಅಧ್ಯಕ್ಷ ಲಕ್ಷ್ಮಣ್ ಆಚಾರ್ಯ ಅವರು ದ್ವಿವೇದಿ ವಿರುದ್ಧ ಕ್ರಮಕೈಗೊಂಡಿದ್ದಾರೆ.ಇಂತಹ ವಿವಾದಾತ್ಮಕ ಹೇಳಿಕೆಯನ್ನು ಪಕ್ಷ ವಿರೋಧಿಸುತ್ತದೆ ಎಂದು ಭಾರದ್ವಾಜ್ ತಿಳಿಸಿದ್ದಾರೆ.
ಬಿಜೆಪಿ ಅಲಹಾಬಾದ್ ಜಿಲ್ಲಾ ಘಟಕದ ಅಧ್ಯಕ್ಷ ರಾಮ್‌ರಕ್ಷ ದ್ವಿವೇದಿಯ ಸುಪುತ್ರನಾದ ಶ್ಯಾಮ್ ದ್ವಿವೇದಿ ಅಸದುದ್ಧೀನ್ ಉವೈಸಿಯನ್ನು ದೇಶದ್ರೋಹಿ ಎಂದು ಕರೆದು ಆತನಿಗೆ ಭಾರತದಲ್ಲಿ ಜೀವಿಸುವ ಹಕ್ಕಿಲ್ಲ.ಒಂದು ವೇಳೆ ಉವೈಸಿ ಭಾರತ್ ಮಾತಾ ಕಿ ಜೈ ಎಂದು ಹೇಳಲು ವಿರೋಧ ವ್ಯಕ್ತಪಡಿಸಿದರೆ ಆತನ ನಾಲಗೆಯನ್ನು ಕತ್ತರಿಸಿದವರಿಗೆ 1.ಕೋಟಿ ರೂಪಾಯಿ ಬಹುಮಾನ ಕೊಡಲಾಗುವುದು ಎಂದು ಅವರು ಹೇಳಿದ್ದರು.