×
Ad

ಭಾರತ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ

Update: 2016-03-22 23:55 IST

ಐಸಿಸಿ ಮಹಿಳೆಯರ ಟ್ವೆಂಟಿ-20 ವಿಶ್ವಕಪ್

ಧರ್ಮಶಾಲಾ, ಮಾ.22: ಐಸಿಸಿ ಮಹಿಳೆಯರ ಟ್ವೆಂಟಿ-20 ವಿಶ್ವಕಪ್‌ನ ಬಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆತಿಥೇಯ ಭಾರತವನ್ನು 2 ವಿಕೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿದೆ.

ಇಲ್ಲಿನ ಎಚ್‌ಪಿಸಿಎ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಟೂರ್ನಿಯ 11ನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 90 ರನ್ ಗಳಿಸಿತು. ನೈಟ್(3-15) ಹಾಗೂ ಶೃಬ್ಸೋಲ್ (2-12) ಐದು ವಿಕೆಟ್‌ಗಳನ್ನು ಹಂಚಿಕೊಂಡರು.

ಭಾರತದ ಪರ ಹರ್ಮನ್‌ಪ್ರೀತ್ ಕೌರ್(26) ಅಗ್ರ ಸ್ಕೋರರ್ ಎನಿಸಿಕೊಂಡರು. ಗೆಲ್ಲಲು ಸುಲಭ ಸವಾಲು ಪಡೆದ ಇಂಗ್ಲೆಂಡ್ ತಂಡ ಎಕ್ತಾ ಬಿಶ್ತ್(4-21) ಹಾಗೂ ಹರ್ಮನ್‌ಪ್ರೀತ್ ಕೌರ್(2-22) ದಾಳಿಗೆ ಸಿಲುಕಿ ಆತಂಕ ಕ್ಷಣವನ್ನು ಎದುರಿಸಿದರೂ ಅಂತಿಮವಾಗಿ ಒಂದು ಓವರ್ ಬಾಕಿ ಇರುವಾಗಲೆ 8 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತು.

ಇಂಗ್ಲೆಂಡ್‌ನ ಪರ ಬಿವೌಂಟ್(20) ಅಗ್ರ ಸ್ಕೋರರ್ ಎನಿಸಿಕೊಂಡರು. ಸತತ 2ನೆ ಪಂದ್ಯದಲ್ಲಿ ಸೋತಿರುವ ಭಾರತ ತಂಡ ಮುಂದಿನ ಸುತ್ತಿಗೇರಬೇಕಾದರೆ ವೆಸ್ಟ್‌ಇಂಡೀಸ್ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲಲೇಬೇಕು. ಮಾತ್ರವಲ್ಲ ಇತರ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ. ಭಾರತ ತಂಡ ಪಾಕ್ ವಿರುದ್ಧದ ಮೊದಲ ಪಂದ್ಯವನ್ನು ಕೇವಲ 2 ರನ್‌ನಿಂದ ಸೋತಿತ್ತು.

ಸಂಕ್ಷಿಪ್ತ ಸ್ಕೋರ್

ಭಾರತ ಮಹಿಳಾ ತಂಡ: 20 ಓವರ್‌ಗಳಲ್ಲಿ 90/8

(ಎಚ್.ಕೌರ್ 26, ಮಿಥಾಲಿ ರಾಜ್ 20, ನೈಟ್ 3-15, ಶೃಬ್ಸೋಲ್ 2-12)

ಇಂಗ್ಲೆಂಡ್ ಮಹಿಳಾ ತಂಡ: 19 ಓವರ್‌ಗಳಲ್ಲಿ 92/8

(ಬೀವೌಂಟ್ 20, ಎಕ್ತಾ ಬಿಶ್ತ್ 4-21, ಎಚ್.ಕೌರ್ 2-22)

ಪಂದ್ಯಶ್ರೇಷ್ಠ: ಎಚ್‌ಸಿ ನೈಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News