×
Ad

ಬ್ರಸೆಲ್ಸ್‌ನಲ್ಲಿ ಕಾಣೆಯಾಗಿರುವ ಇನ್ಫೋಸಿಸ್ ಉದ್ಯೋಗಿ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದರು: ಸುಷ್ಮಾ

Update: 2016-03-24 23:30 IST

ಹೊಸದಿಲ್ಲಿ, ಮಾ.24: ಬ್ರಸೆಲ್ಸ್‌ನಲ್ಲಿ ಮಂಗಳವಾರ ನಡೆದ ಮಾರಕ ಭಯೋತ್ಪಾದನಾ ದಾಳಿಯ ಬಳಿಕ ಕಾಣೆಯಾಗಿರುವ ಭಾರತೀಯ ಇನ್ಫೋಸಿಸ್ ಉದ್ಯೋಗಿ ರಾಘವೇಂದ್ರ ಗಣೇಶ್, ‘ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದರು’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ಮುಂಜಾನೆ ಟ್ವೀಟ್ ಮಾಡಿದ್ದಾರೆ.
ಮೂಲತಃ ಬೆಂಗಳೂರಿನವರಾದ ಅವರು, ಬೆಲ್ಜಿಯನ್ ರಾಜಧಾನಿಯಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ರಾಘವೇಂದ್ರರ ಸಹೋದರ ಬ್ರಸೆಲ್ಸ್‌ಗೆ ತಲುಪಿದ್ದು, ಅವರಿಗೆ ಸೋದರನನ್ನು ಹುಡುಕಲು ಅಲ್ಲಿನ ಭಾರತೀಯ ದೂತಾವಾಸ ಸಹಾಯ ಮಾಡುತ್ತಿದೆಯೆಂದು ಸುಷ್ಮಾ ತಿಳಿಸಿದ್ದಾರೆ.
ಜೆಟ್ ಏರ್‌ವೇಸ್‌ನ ಇಬ್ಬರು ಭಾರತೀಯ ಉದ್ಯೋಗಿಗಳಾದ ನಿಧಿ ಚಾಫೆಕರ್ ಹಾಗೂ ಅಮಿತ್ ಮೋತ್ವಾನಿ ಎಂಬವರು ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡಿದ್ದು,,ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ತಾನು ಬೆಂಗಳೂರಿನಲ್ಲಿರುವ ಗಣೇಶ್‌ರ ತಾಯಿಯೊಂದಿಗೆ ನೇರ ಸಂಪರ್ಕದಲ್ಲಿದ್ದೇನೆಂದು ಸುಷ್ಮಾ ನಿನ್ನೆ ಟ್ವೀಟ್ ಮಾಡಿದ್ದರು. ಭಯೋತ್ಪಾದಕ ದಾಳಿಗೆ ತಾಸು ಮೊದಲು ಗಣೇಶ್ ಕೊನೆಯ ಬಾರಿಗೆ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News