ರಾಜೀನಾಮೆ ನೀಡಿಯೂ ಐಸಿಎಚ್‌ಆರ್ ಮುಖ್ಯಸ್ಥನಾಗಿ ರಾವ್ ಮುಂದುವರಿಕೆ
ಹೊಸದಿಲ್ಲಿ, ಮಾ.27: ರಾಜೀನಾಮೆ ನೀಡಿ ಸುಮಾರು 4 ತಿಂಗಳ ಬಳಿಕವೂ ಇತಿಹಾಸ ಸಂಶೋಧನೆಯ ಭಾರತೀಯ ಮಂಡಳಿಯ (ಐಸಿಎಚ್‌ಆರ್) ಮುಖ್ಯಸ್ಥರಾಗಿ ವೈ. ಸುದರ್ಶನ ರಾವ್ ಮುಂದುವರಿದಿದ್ದಾರೆ. ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯವು ಅವರ ರಾಜೀನಾಮೆಯ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳದಿರುವುದು ಇದಕ್ಕೆ ಕಾರಣವಾಗಿದೆ.
ರಾವ್, ಮಂಗಳವಾರ ಸಂಸ್ಥೆಯ ಸ್ಥಾಪನಾದಿನದಂದು ಉಪಾನ್ಯಾಸ ಕಾರ್ಯಕ್ರಮವೊಂದರಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ.
ತನ್ನ ರಾಜೀನಾಮೆಗೆ ಸಂಬಂಧಿಸಿ ಸಚಿವಾಲಯವು ತನ್ನ ಹೇಳಿಕೆ ಆಲಿಸದಿರುವ ಕಾರಣ ತಾನು ಕರ್ತವ್ಯದಲ್ಲಿ ಮುಂದುವರಿದಿದ್ದೇನೆ. ಮಾ.29ರಂದು ತನ್ನ ಕರ್ತವ್ಯದ ಭಾಗವಾಗಿರುವ ಸಭೆಯೊಂದನ್ನೂ ತಾನು ನಡೆಸಲಿದ್ದೇನೆಂದು ಅವರು ತಿಳಿಸಿದ್ದಾರೆ.
16 ತಿಂಗಳು ಅಧಿಕಾರದಲ್ಲಿದ್ದ ರಾವ್, 'ವೈಯಕ್ತಿಕ ಕಾರಣಗಳಿಗಾಗಿ' ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ, ಸ್ಮತಿ ಇರಾನಿ ನೇತೃತ್ವದ ಸಚಿವಾಲಯ ಇನ್ನೂ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ.
ತನಗೆ ರೂ.1.5ಲಕ್ಷ ಗೌರವ ಸಂಭಾವನೆ ನೀಡಬೇಕೆಂಬ ರಾವ್ ಅವರ ಪ್ರಸ್ತಾವವನ್ನು ಸಚಿವಾಲಯ ತಿರಸ್ಕರಿಸಿದುದರಿಂದ ಅಸಮಾಧಾನಗೊಂಡು ಅವರು ರಾಜೀನಾಮೆ ನೀಡಿದ್ದಾರೆಂಬ ವರದಿಗಳಿವೆ.