×
Ad

ಇ-ವಾಣಿಜ್ಯ ಮಾರುಕಟ್ಟೆ ಸ್ಥಳ ಮಾದರಿಯಲ್ಲಿ ಶೇ.100 ಎಫ್‌ಡಿಐಗೆ ಅಸ್ತು

Update: 2016-03-29 22:32 IST

ಹೊಸದಿಲ್ಲಿ, ಮಾ.29: ಹೆಚ್ಚು ವಿದೇಶಿ ಹೂಡಿಕೆ ಆಕರ್ಷಿಸುವ ದೃಷ್ಟಿಯಿಂದ ಸರಕಾರವು ಇ-ವಾಣಿಜ್ಯ ಚಿಲ್ಲರೆ ಮಾರುಕಟ್ಟೆ ಮಾದರಿಯಲ್ಲಿ ಶೇ.100 ವಿದೇಶಿ ನೇರ ಹೂಡಿಕೆಗೆ ಹಸಿರು ನಿಶಾನೆ ತೋರಿಸಿದೆ.

ಕೈಗಾರಿಕಾ ನೀತಿ ಹಾಗೂ ಉತ್ತೇಜನ ಇಲಾಖೆ(ಡಿಐಪಿಪಿ) ಹೊರಡಿಸಿರುವ ಮಾರ್ಗಸೂಚಿಯನ್ವಯ, ಸರಕು ವಿವರಣೆ ಪಟ್ಟಿ ಆಧಾರಿತ ಇ-ವಾಣಿಜ್ಯ ಮಾದರಿಯಲ್ಲಿ ವಿದೇಶಿ ನೇರ ಹೂಡಿಕೆಗೆ ಅವಕಾಶವಿಲ್ಲ.
ಸರಕಾರವು ಇ-ವಾಣಿಜ್ಯ ವಲಯವನ್ನು ನಿಯಮಿತ ಮಾರ್ಗದಲ್ಲಿ ಎಫ್‌ಡಿಐಗೆ ತೆರೆದಿರಿಸಿದೆ.
ಸದ್ಯ, ಅಮೇಜಾನ್ ಹಾಗೂ ಇ-ಬೇಗಳಂತಹ ಇ-ಟೇಲ್ ದೈತ್ಯರು ಭಾರತದಲ್ಲಿ ಆನ್‌ಲೈನ್ ಮಾರುಕಟ್ಟೆಗಳನ್ನು ಸಂಚಾಲಿಸುತ್ತಿವೆ. ಇದೇ ವೇಳೆ, ವಿವಿಧ ಆನ್‌ಲೈನ್ ಚಿಲ್ಲರೆ ಮಾರುಕಟ್ಟೆ ಮಾದರಿಗಳಿಗೆ ಸ್ಪಷ್ಟವಾದ ಮಾರ್ಗಸೂಚಿ ಇಲ್ಲದಿದ್ದರೂ, ಫ್ಲಿಪ್‌ಕಾರ್ಟ್ ಹಾಗೂ ಸ್ನಾಪ್‌ಡೀಲ್‌ಗಳಂತಹ ಸ್ವದೇಶದಲ್ಲಿ ಬೆಳೆದ ಸಂಸ್ಥೆಗಳು ವಿದೇಶಿ ಹೂಡಿಕೆಗಳನ್ನು ಪಡೆದಿವೆ.
 ಸ್ಪಷ್ಟತೆಯನ್ನು ತರುವುದಕ್ಕಾಗಿ, ಡಿಐಪಿಪಿ, ‘ಇ-ವಾಣಿಜ್ಯ’, ಸರಕು ವಿವರಣೆ ಪಟ್ಟಿ ಆಧಾರಿತ’ ಹಾಗೂ ‘ಮಾರುಕಟ್ಟೆಗಳ ಮಾದರಿಗಳ ವ್ಯಾಖ್ಯೆಯೊಂದಿಗೆ ಮುಂದೆ ಬಂದಿದೆ.
ಇ-ವಾಣಿಜ್ಯದ ಮಾರುಕಟ್ಟೆ ಸ್ಥಳ ಮಾದರಿಯೆಂದರೆ, ಕೊಳ್ಳುವವರು ಹಾಗೂ ಮಾರುವವರ ನಡುವೆ ಸಹಾಯಕನಂತೆ ವ್ಯವಹರಿಸಲು ಡಿಜಿಟಲ್ ಹಾಗೂ ಇಲೆಕ್ಟ್ರಾನಿಕ್ ಜಾಲದ ಮೂಲಕ ಇ-ವಾಣಿಜ್ಯ ಸಂಸ್ಥೆಯೊಂದು ಐಟಿ ವೇದಿಕೆಯನ್ನು ಒದಗಿಸುವುದಾಗಿದೆ.
ಇ-ವಾಣಿಜ್ಯದ ಸರಕು ವಿವರಣೆ ಪಟ್ಟಿ ಆಧಾರಿತ ಮಾದರಿಯೆಂದರೆ, ಸರಕು ಹಾಗೂ ಸೇವೆಗಳ ಪಟ್ಟಿಯ ಮಾಲಕತ್ವ ಹೊಂದಿರುವ ಇ-ವಾಣಿಜ್ಯ ಸಂಸ್ಥೆಯು ನಡೆಸುವ ಇ-ವಾಣಿಜ್ಯ ಚಟುವಟಿಕೆಗಳು. ಮಾರ್ಗಸೂಚಿಯನ್ವಯ ಸರಕು ಹಾಗೂ ಸೇವೆಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News