ತರಗತಿಗೆ ಮರಳಿದ ಹೈದರಾಬಾದ್ ಕೇಂದ್ರೀಯ ವಿವಿ ವಿದ್ಯಾರ್ಥಿಗಳು
ಹೈದರಾಬಾದ್, ಮಾ.29:ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಪಕುಲಪತಿ ಅಪ್ಪಾರಾವ್ ಅವರ ವಜಾಕ್ಕೆ ಆಗ್ರಹಿಸುತ್ತಿರುವ 14 ವಿದ್ಯಾರ್ಥಿ ಸಂಘಟನೆಗಳನ್ನು ಪ್ರತಿನಿಧಿಸುವ ಜಂಟಿ ಕ್ರಿಯಾ ಸಮಿತಿಯು,ಮಂಗಳವಾರ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸುವ ನಿರ್ಧಾರವನ್ನು ಹಿಂದೆಗೆದುಕೊಂಡಿದೆ ಅಲ್ಲದೇ ವಿದ್ಯಾರ್ಥಿಗಳು ಪ್ರತಿಭಟನೆಯ ಸಂಕೇತವಾಗಿ ತಮ್ಮ ಅಂಗಿಯ ತೋಳಿನಲ್ಲಿ ನೀಲಿ ಪಟ್ಟಿ ಧರಿಸಿ ತರಗತಿಗೆ ಹಾಜರಾಗುವಂತೆ ಅದು ಮನವಿ ಮಾಡಿಕೊಂಡಿದೆ.
ಮಾರ್ಚ್22 ರಂದು ಪೊಲೀಸರು ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮತೆಗೆದುಕೊಂಡಿರುವುದನ್ನು ವಿರೋಧಿಸಿ ಮತ್ತು ವಿಶ್ವವಿದ್ಯಾನಿಲಯದ ಉಪಕುಲಪತಿ ಅಪ್ಪಾರಾವ್ ಕರ್ತವ್ಯಕ್ಕೆ ಮರಳಿರುವುದರ ವಿರುದ್ಧ 40ಕ್ಕೂ ಹೆಚ್ಚು ದಲಿತ ಶಿಕ್ಷಕರು ಸಾಮೂಹಿಕ ರಜೆಯಲ್ಲಿ ತೆರಳಿದ್ದರು.ಈ ನಡುವೆ ವಿಶ್ವವಿದ್ಯಾನಿಲಯದ ಉಪನ್ಯಾಸಕರಿಗೆ ಕೂಡ ವಿದ್ಯಾರ್ಥಿ ಸಂಘಟನೆಗಳು ತಮ್ಮ ಅಂಗಿಯ ತೋಳಿನಲ್ಲಿ ಪಟ್ಟಿ ಧರಿಸಿ ತರಗತಿಗೆ ಹಾಜರಾಗುವಂತೆ ಮನವಿ ಮಾಡಿಕೊಂಡಿವೆ. ರೋಹಿತ್ ವೇಮುಲಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರೆಂದು ಆರೋಪಿಸಲಾಗಿರುವ ಉಪಕುಲಪತಿ ಅಪ್ಪಾರಾವ್ ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಮತ್ತು ಬಂಧಿಸಬೇಕು ಪ್ರತಿಭಟನಾಕಾರರು ಒತ್ತಾಯಪಡಿಸುತ್ತಿದ್ದಾರೆ.
‘‘ವಿಶ್ವವಿದ್ಯಾನಿಲಯದ ಉಪಕುಲಪತಿ ಅಪ್ಪಾರಾವ್ ಕರ್ತವ್ಯಕ್ಕೆ ಮರಳಿರುವುದರಿಂದ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ದಿನನಿತ್ಯದ ಕೆಲಸಕಾರ್ಯಗಳಿಗೆ ಅಡ್ಡಿಯಾಗಿದ್ದು, ಅಲ್ಲದೇ ಇದು ಸೆಮಿಸ್ಟರ್‌ನ ಕೊನೆಯ ಅವಧಿ ಮತ್ತು ವಿದ್ಯಾರ್ಥಿಗಳ ಪಾಲಿಗೆ ಇದು ಪ್ರಮುಖ ಸಮಯವಾಗಿರುವುದರಿಂದ ಪ್ರತಿಭಟನೆಯ ಭಾಗವಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿ ತಮ್ಮ ಅಂಗಿಯ ತೋಳಿನಲ್ಲಿ ನೀಲಿ ಪಟ್ಟಿ ಧರಿಸುವಂತೆ ನಾವು ಮನವಿ ಮಾಡಿಕೊಂಡಿದ್ದೇವೆ, ಅಲ್ಲದೇ ನಮ್ಮ ಪ್ರತಿಭಟನೆಯೂ ಅವರ ತರಗತಿಗಳು ಪ್ರಯೋಗಾಲಯಗಳು ಹಾಗೂ ಇತರ ಚಟುವಟಿಕೆಗಳು ನಡೆಯುತ್ತಿರುವ ಮಧ್ಯೆಯೇ ನಮ್ಮ ಹೋರಾಟ ಮುಂದುವರಿಯಲಿದೆ’’ ಎಂದು ಜಂಟಿ ಕ್ರಿಯಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ. ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಕುಲಪತಿ ಅಪ್ಪಾರಾವ್ ಮೇಲೆ ಎಫ್‌ಐಆರ್ ದಾಖಲಿಸಿರುವುದರಿಂದ ಅವರು ರಜೆಯಲ್ಲಿ ತೆರಳಿದ್ದರು.ಪ್ರತಿಭಟನೆ ಮುಂದುವರಿದುದರಿಂದ ವಿದ್ಯಾರ್ಥಿಗಳ ಎರಡುವಾರಗಳ ತರಗತಿ ನಷ್ಟವಾಗಿದೆ.
ಮಾರ್ಚ್ 22ರಂದು ಉಪಕುಲಪತಿ ಕರ್ತವ್ಯಕ್ಕೆ ಮರಳಿ ಹಾಜರಾಗಿದ್ದಕ್ಕೆ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ ಕ್ಯಾಂಪಸ್‌ನಲ್ಲಿರುವ ಉಪಕುಲಪತಿಯ ಕಚೇರಿಯ ಕೊಠಡಿಯನ್ನು ಹಾನಿಗೊಳಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಉಪನ್ಯಾಸಕ ಸಹಿತ 22 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು. ಸ್ಥಳೀಯ ನ್ಯಾಯಾಲಯವು ಸೋಮವಾರ ವಿದ್ಯಾರ್ಥಿಗಳಿಗೆ ಜಾಮೀನು ನೀಡಿದೆ