ತಾಜ್ ಮಹಲ್‌ ಕಟ್ಟಡದಿಂದ ಕೆಳಗೆ ಬಿದ್ದ ಹಿತ್ತಾಳೆ ಕಲಶ

Update: 2016-03-30 09:52 GMT

ಆಗ್ರಾ : ಮಾ 30, ವಿಶ್ವದ ಏಳು ಅದ್ಭುತಗಳಲ್ಲೊಂದಾದ ಆಗ್ರಾದ ತಾಜ್ ಮಹಲಿನ ನಾಲ್ಕು ಸ್ಥಂಭಗೋಪುರಗಳಲ್ಲಿ ಒಂದು ಗೋಪುರದ ತುತ್ತತುದಿಯಲ್ಲಿರುವ ಹಿತ್ತಾಳೆಯ ಕಲಶವೊಂದು ಮಂಗಳವಾರ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಆದರೆ ಈ ಘಟನೆಯಿಂದ ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಕಷ್ಟಕ್ಕೀಡಾಗಿದ್ದುಈ ವಿಶ್ವವಿಖ್ಯಾತ ಸ್ಮಾರಕದ ಸಂರಕ್ಷಣೆ ಹಾಗೂ ನಿರ್ವಹಣೆಯ ಬಗ್ಗೆ ಹಲವಾರು ಸಂಶಯಗಳೆದ್ದಿವೆ.

ಈ ಘಟನೆಯ ನಂತರ ತನ್ನನ್ನು ಸಮರ್ಥಿಸಿಕೊಂಡಿರುವಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ ಈ ಹಿತ್ತಾಳೆ ಕಲಶವನ್ನು ಅಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯಗಳ ಅಂಗವಾಗಿ ಕಾರ್ಮಿಕರು ಕೆಳಕ್ಕೆ ತಂದಿದ್ದಾರೆ ಎಂದು ಹೇಳಿಕೊಂಡಿದೆ.‘‘ಅದರ ಒಳಗಿನ ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದಿರುವುದರಿಂದ ಈ ಕ್ರಮ ಕೈಗೊಳ್ಳಲಾಯಿತು,’’ ಎಂದು ದುರಸ್ತಿ ಕಾರ್ಯದ ಉಸ್ತುವಾರಿಯನ್ನು ಹೊತ್ತ ರಾಮ್ ರತನ್ ಹೇಳಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ನಾಲ್ಕು ಅಡಿ ಉದ್ದದ ತುಂಡೊಂದು ಕೆಳಕ್ಕೆ ಬಿದ್ದಿದ್ದು ಅದು ದುರಸ್ತಿ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ನಿರ್ಮಿಸಿರುವ ಹಗ್ಗ ಹಾಗೂ ಬಿದಿರಿನ ಕೋಲುಗಳಿಂದ ಕೂಡಿದ ಮೆಶ್ ಒಂದರಲ್ಲಿ ಸಿಕ್ಕಿಹಾಕಿಕೊಂಡಿದೆ.

ತಾಜ್ ಮಹಲ್‌ನ ಪ್ರಸಕ್ತ ಸ್ಥಿತಿಯ ಬಗ್ಗೆ ಅವಲೋಕಿಸಿದ್ದ ಸುಪ್ರೀಂ ಕೋರ್ಟ್ ಮತ್ತು ಸಂಸದೀಯ ಸಮಿತಿ ಅದರ ನಿರ್ವಹಣೆಯ ವಿಚಾರದಲ್ಲಿ ಕಳವಳ ವ್ಯಕ್ತಪಡಿಸಿದ್ದು ಈ ಹಿಂದೆ ಅಲ್ಲಿರುವ ಅಲಂಕಾರಿಕ ದೀಪವೊಂದು (ಕರ್ಜನ್ ಲ್ಯಾಂಪ್) ಕೂಡ ಕೆಳಕ್ಕುರುಳಿರುವುದನ್ನು ಇಲ್ಲಿ ಸ್ಮರಿಸಬಹುದು. ಕಳೆದ ವರ್ಷಮಳೆಯ ಸಂದರ್ಭ ರಾಯಲ್ ಗೇಟಿನಿಂದ ಕಲ್ಲಿನ ತುಂಡುಗಳೂ ಕೆಳಕ್ಕುರುಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News