×
Ad

ಕೊಲ್ಲಂ ಸಿಡಿಮದ್ದು ದುರಂತ: ಭಾರೀ ಸ್ಫೋಟಕಗಳಿರುವ ಮೂರು ಕಾರುಗಳು ಪತ್ತೆ

Update: 2016-04-11 23:34 IST

ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯದಳ

ದುರಂತಕ್ಕೆ ಸಂಬಂಧಿಸಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲು

ಕೊಲ್ಲಂ, ಎ.11: ಇಲ್ಲಿನ ಪುಟ್ಟಿಂಗಲ್ ದೇವಿ ದೇವಾಲಯದಲ್ಲಿ ಮೊನ್ನೆ ರಾತ್ರಿ ಸಂಭವಿಸಿದ್ದ ಸಿಡಿಮದ್ದು ದುರಂತಕ್ಕೆ ಸಂಬಂಧಿಸಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದೇವಳದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಡಿಮದ್ದು ಗುತ್ತಿಗೆದಾರರ ಸಹವರ್ತಿಗಳ ಸಹಿತ 6 ಮಂದಿಯ ವಿರುದ್ಧ ಪೊಲೀಸರು ಕೊಲೆ ಯತ್ನ ಮತ್ತಿತರ ಆರೋಪಗಳನ್ವಯ ಪ್ರಕರಣವೊಂದನ್ನು ದಾಖಲಿಸಿದ್ದಾರೆ.

ಇದೇ ಸಂದರ್ಭದಲ್ಲಿ ಭಾರೀ ಸ್ಫೋಟಕಗಳನ್ನು ಒಳಗೊಂಡ 3 ಕಾರುಗಳು ಸೋಮವಾರ ದೇವ ಸ್ಥಾನದ ಸಮೀಪ ಪತ್ತೆಯಾಗಿವೆ. ತಕ್ಷಣ ಬಾಂಬ್ ನಿಷ್ಕ್ರಿಯ ದಳವು ಸ್ಥಳಕ್ಕೆ ಧಾವಿಸಿದ್ದು ಬಾಂಬ್‌ಗಳನ್ನು ತಟಸ್ಥಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತಂತೆ ತನಿಖೆ ಮುಂದುವರಿದಿದೆ.

ಇದೇ ಸಂದರ್ಭದಲ್ಲಿ ಸಿಡಿಮದ್ದು ಪ್ರದರ್ಶನದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಸ್ಫೋಟಕಗಳ ಕುರಿತಂತೆಯೂ ಮಾಹಿತಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಐವರನ್ನು ವಿಚಾರಣೆಗಾಗಿ ವಶಪಡಿಸಿಕೊಳ್ಳಲಾಗಿದೆ. ಆದರೆ, ಪ್ರಕರಣ ದಾಖಲಿಸಲಾದವರು ಹಾಗೂ ವಶಪಡಿಸಿಕೊಳ್ಳಲಾದವರ ಗುರುತನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.

ಆರೋಪಿಗಳ ವಿರುದ್ಧ ಐಪಿಸಿಯ ಸೆ.37 (ಕೊಲೆ) ಹಾಗೂ 308 (ಮಾನವ ಹತ್ಯಾ ಪ್ರಯತ್ನ) ಮತ್ತು ಸ್ಫೋಟಕ ವಸ್ತು ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ದೇವಾಲಯ ಸಂಕೀರ್ಣದ ದುರ್ಘಟನಾ ಸ್ಥಳದಿಂದ ಸಾಕ್ಷ ಸಂಗ್ರಹಿಸುವುದರೊಂದಿಗೆ ಅಪರಾಧ ವಿಭಾಗವು ತನಿಖೆಯನ್ನು ಆರಂಭಿಸಿದೆಯೆಂದು ಅಪರಾಧ ವಿಭಾಗದ ವಿಶೇಷ ತನಿಖೆ ತಂಡದ ನೇತೃತ್ವ ವಹಿಸಿರುವ ಎಡಿಜಿಪಿ, ಎಸ್ ಅನಂತ ಕೃಷ್ಣನ್ ಹೇಳಿದ್ದಾರೆ.

ದಾಖಲೆಗಳು ಹಾಗೂ ಸಾಕ್ಷಗಳ ಸಂಗ್ರಹದ ಬಳಿಕ ಇನ್ನಷ್ಟು ಮಂದಿಯನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಆರೋಪಿಗಳಲ್ಲಿ, ದೇವಳದಲ್ಲಿ ಸಿಡಿಮದ್ದು ಸ್ಪರ್ಧೆಯ ಗುತ್ತಿಗೆ ವಹಿಸಿದ್ದವರ ಇಬ್ಬರು ಸಹಚರರಾದ ಸುರೇಂದ್ರನ್ ಹಾಗೂ ಕೃಷ್ಣಕುಟ್ಟಿ ಎಂಬವರು ಸೇರಿದ್ದಾರೆ.

ಗುತ್ತಿಗೆದಾರನ ಕೈಕೆಳಗೆ ಕೆಲಸ ಮಾಡುತ್ತಿದ್ದ ಐವರು ಕೆಲಸಗಾರರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ತಿರುವನಂತಪುರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಗಾಯಾಳುಗಳು ಇಂದು ಕೊನೆಯುಸಿರೆಳೆದಿದ್ದಾರೆ.

ನಿಯಮಗಳ ಘೋರ ಉಲ್ಲಂಘನೆ

ಕೊಲ್ಲಂ, ಎ.11: ಇಲ್ಲಿಯ ಪುಟ್ಟಿಂಗಲ್ ದೇವಿ ದೇವಸ್ಥಾನದಲ್ಲಿ ರವಿವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತದ ಬಗ್ಗೆ ಕೈಗೊಳ್ಳಲಾದ ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ನಿಯಮಾವಳಿಗಳನ್ನು ಸಾರಾಸಗಟಾಗಿ ಉಲ್ಲಂಘಿಸಲಾಗಿತ್ತು ಮತ್ತು ಮೂಲಭೂತ ಮುನ್ನೆಚ್ಚರಿಕೆಗಳನ್ನು ಕಡೆಗಣಿಸಲಾಗಿತ್ತು,ಜೊತೆಗೆ ನಿಷೇಧದ ಆದೇಶವನ್ನೂ ಉಲ್ಲಂಘಿಸಲಾಗಿತ್ತು ಎನ್ನುವುದು ಬೆಳಕಿಗೆ ಬಂದಿದೆ.

ಅವಘಡ ಸಂಭವಿಸಿದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ್ದ ಸ್ಫೋಟಕಗಳ ಮುಖ್ಯ ನಿಯಂತ್ರಣಾಧಿಕಾರಿ ಸುದರ್ಶನ್ ಕಮಲ್ ಅವರು ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದರು.

ಸಿಡಿಮದ್ದು ಪ್ರದರ್ಶನದಲ್ಲಿ ಬಳಕೆಯಾದ ಸ್ಫೋಟಕಗಳ ಬಗ್ಗೆ ನಾವು ತನಿಖೆ ಕೈಗೊಂಡಿದ್ದೇವೆ ಎಂದ ಅವರು, ಪಟಾಕಿಗಳ ತಯಾರಿಕೆಯಲ್ಲಿ ನಿಷೇಧಿತ ರಾಸಾಯನಿಕಗಳನ್ನು ಉಪಯೋಗಿಸಲಾಗಿತ್ತು ಎಂದರು.

ನಿಷೇಧ ಆದೇಶವನ್ನು ಉಲ್ಲಂಘಿಸಲಾಗಿದೆ ಮತ್ತು ಅದನ್ನು ಉಲ್ಲಂಘಿಸಿದವರು ಯಾರು ಎನ್ನುವುದನ್ನು ದೃಢಪಡಿಸಿಕೊಳ್ಳಬೇಕಾಗಿದೆ ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಶಾಹನವಾಝ್ ತಿಳಿಸಿದರು.

ತನ್ಮಧ್ಯೆ, ಸಿಡಿಮದ್ದು ಪ್ರದರ್ಶನಕ್ಕೆ ಅನುಮತಿ ಕೋರಿ ಪುಟ್ಟಿಂಗಲ್ ದೇವಸ್ವಂ ಆಡಳಿತ ಸಮಿತಿಯ ಕಾರ್ಯದರ್ಶಿ ಜೆ.ಕೃಷ್ಣನ್‌ಕುಟ್ಟಿ ಪಿಳ್ಳೈ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು ಎಂದು ತಿಳಿಸಿರುವ ಎಡಿಎಂ ಹೊರಡಿಸಿದ್ದ ಆದೇಶದ ಪ್ರತಿಯು ಬಹಿರಂಗಗೊಂಡಿದೆ. ಇದು ಸಿಡಿಮದ್ದು ಪ್ರದರ್ಶನವಲ್ಲ, ಸ್ಪರ್ಧೆಯಾಗಿರುವುದರಿಂದ ಅನುಮತಿಯನ್ನು ನಿರಾಕರಿಸಲಾಗಿತ್ತು ಎಂದು ಆದೇಶದಲ್ಲಿ ಹೇಳಲಾಗಿದ್ದು,ನಿಷೇಧವನ್ನು ಉಲ್ಲಂಘಿಸಿದವರ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆಯ ಕಲಂ 208ರಡಿ ಕ್ರಮವನ್ನು ಜರಗಿಸಲಾಗುವುದು ಎಂದು ಅದು ತಿಳಿಸಿದೆ. ದೇವಸ್ಥಾನದ ಅಧಿಕಾರಿಗಳು ಆದೇಶವನ್ನು ಉಲ್ಲಂಘಿಸುತ್ತಾರೆಯೇ ಎನ್ನುವುದರ ಮೇಲೆ ನಿಗಾ ಇರಿಸುವಂತೆ ಪೊಲೀಸ್ ಅಧಿಕಾರಿಗಳಿಗೂ ಸೂಚಿಸಲಾಗಿತ್ತು.

ದೇವಸ್ಥಾನಕ್ಕೆ ಹೊಂದಿಕೊಂಡೇ ವಾಸವಿರುವ ಪಂಕಜಾಕ್ಷಿಯಮ್ಮ(80) ಅವರ ದೂರಿನ ಮೇರೆಗೆ ಎ.8ರಂದು ಈ ಆದೇಶವನ್ನು ಹೊರಡಿಸಲಾಗಿತ್ತು.

ಪ್ರತಿವರ್ಷ ದೇವಸ್ಥಾನದಲ್ಲಿ ನಡೆಯುವ ಸಿಡಿಮದ್ದು ಪ್ರದರ್ಶನ ಸ್ಪರ್ಧೆಯಿಂದಾಗಿ ತನ್ನ ಮನೆಗೆ ಹಾನಿಯಾಗುತ್ತಿದೆ ಎಂದು ದೂರಿಕೊಂಡಿದ್ದ ಅವರು,ಇದನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದರು.

ತನ್ಮಧ್ಯೆ ಇಲ್ಲಿಗೆ ಸಮೀಪದ ಅಟ್ಟಿಂಗಲ್‌ನಲ್ಲಿ ಕನಿಷ್ಠ 100 ಕೆ.ಜಿ.ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಸಿಡಿಮದ್ದು ಪ್ರದರ್ಶನದ ಗುತ್ತಿಗೆದಾರನ ಪುತ್ರ ಉಮೇಶ ಎಂಬಾತನನ್ನು ಬಂಧಿಸಿದ್ದಾರೆ. ಕೊಲ್ಲಂ ಮತ್ತು ತಿರುವನಂತಪುರದ ಹಲವಾರು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News