ಹುಡುಗಿಯರು ಜೀನ್ಸ್ ತೊಟ್ಟರೆ ಕುಟುಂಬಕ್ಕೆ ಬಹಿಷ್ಕಾರ
ಬಾಘಪತ್ (ಉ.ಪ್ರ), ಎ11: ಜೀನ್ಸ್ ಹಾಗೂ ಬಿಗಿಯಾದ ಬಟ್ಟೆಗಳನ್ನು ಧರಿಸುವ ಹುಡುಗಿಯರ ಕುಟುಂಬಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ಉತ್ತರ ಪ್ರದೇಶದ ಗ್ರಾಮ ಪಂಚಾಯತೊಂದು ಕೈಗೊಂಡಿದೆ.
ಬಾವ್ಲಿ ಗ್ರಾಮದಲ್ಲಿ ನಡೆಸಿದ ಪಂಚಾಯತೊಂದರಲ್ಲಿ, ಹುಡುಗಿಯರು ಜೀನ್ಸ್ ಹಾಗೂ ಬಿಗಿ ಉಡುಪುಗಳನ್ನು ತೊಡಬಾರದು. ಅಂತಹ ಬಟ್ಟೆ ತೊಡುವ ಹುಡುಗಿಯರ ಕುಟುಂಬಗಳನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆಯೆಂದು ಗ್ರಾಮ ಪ್ರಧಾನ ಓಂವೀರ್ ಎಂಬವರು ಪತ್ರಕರ್ತರಿಗೆ ತಿಳಿಸಿದ್ದಾರೆ.
ವರದಕ್ಷಿಣೆ ನೀಡದಂತೆ ಹಾಗೂ ಪಡೆಯುದಂತೆಪಣ ತೊಡಲು ಗ್ರಾಮಸ್ಥರಿಗೆ ಕರೆ ನೀಡಿರುವ ಪಂಚಾಯತ್,ಮದುವೆಗಳಲ್ಲಿ ಡಿಜೆಗಳ ಉಪಯೋಗವನ್ನು ವಿರೋಧಿಸಿದೆ. ಹೆಣ್ಣು ಭ್ರೂಣಹತ್ಯೆಯ ವಿರುದ್ಧವೂ ಅದು ಹೋರಾಡಲು ನಿರ್ಧರಿಸಿದೆ.
ಈ ನಿರ್ಧಾರಕ್ಕೆ ಬದ್ಧವಾಗದ ಯಾವುದೇ ಕುಟುಂಬವನ್ನು ಬಹಿಷ್ಕರಿಸಲಾಗುವುದೆಂದು ಓಂವೀರ್ ಹೇಳಿದ್ದಾರೆ.
ಯಾರೂ ಸಹ ‘ತೇರಹ್ವಿ’ಯಲ್ಲಿ (ಮೃತರ 13ನೆ ಕಾರ್ಯಕ್ರಮ) ಭಾಗವಹಿಸಬಾರದು ಹಾಗೂ ಅಲ್ಲಿ ಊಟ ಮಾಡಬಾರದೆಂದೂ ಪಂಚಾಯತ್ ಆದೇಶಿಸಿದೆ.