ಕೃಷಿ ಕ್ಷೇತ್ರ ವೈಭವ ಪಡೆಯುವುದು ಯಾವಾಗ?
ಮಾನ್ಯರೆ,
ಮಧ್ಯ ಪ್ರದೇಶದ ನೀಮುಜ್ ಎಂಬಲ್ಲಿ ಈರುಳ್ಳಿ ಬೆಲೆ ಕಿಲೋಗೆ ಕೇವಲ ಮೂವತ್ತು ಪೈಸೆಗೆ ಇಳಿದು ರೈತರು ಕಂಗಾಲಾಗಿದ್ದಾರಂತೆ.ಇನ್ನೂ ಆರು ತಿಂಗಳ ನಂತರ ಇದೇ ಈರುಳ್ಳಿ ಬೆಲೆ ಕಿಲೋಗೆ ಎಂಬತ್ತು ರೂಪಾಯಿಗೆ ಏರಿ ಗ್ರಾಹಕರು ಕಂಗಾಲಾಗುತ್ತಾರೆ ಅಷ್ಟೇ. ಕಾರಣ ಈಗಿನ ಸರಕಾರದಡಿ ಎಲ್ಲೆಲ್ಲೂ ಕೇವಲ ದಲ್ಲಾಳಿಗಳದ್ದೇ ಕಾರುಬಾರು. ಆದರೆ ಕೇಂದ್ರ ಸರಕಾರ ಲಕ್ಷಾಂತರ ಕೋಟಿ ರೂ. ಖರ್ಚು ಮಾಡಿ ದೇಶದಲ್ಲಿ ವಿಮಾನದಷ್ಟೇ ಸುಖಾಸನವುಳ್ಳ ಸೂಪರ್ ಫಾಸ್ಟ್ ಟ್ರೇನುಗಳನ್ನು ಶುರು ಮಾಡಿದೆ. ಒಂದು ಲಕ್ಷ ಕೋಟಿ ರೂ. ಖರ್ಚು ಮಾಡಿ ಕೇವಲ ಶ್ರೀಮಂತರು ಮಾತ್ರ ಪ್ರಯಾಣಿಸಬಹುದಾದ ದುಬಾರಿ ಲಗ್ಝುರಿ ರೈಲುಗಳಿಗಿಂತ ನಮ್ಮ ದೇಶಕ್ಕೆ ಈಗ ಅಗತ್ಯವಾಗಿ ಬೇಕಾಗಿರುವುದು ರೈತರು ದೇಶದೆಲ್ಲೆಡೆ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿ ರಕ್ಷಿಸಿಡುವಂತಹ ಕೊಲ್ಡ್ ಸ್ಟೋರೇಜುಗಳು. ಇದರಿಂದ ಕೃಷಿ ಉತ್ಪನ್ನಗಳ ಬೆಲೆ ಈ ರೀತಿ ವಿಪರೀತ ಏರುಪೇರಾಗಿ ರೈತರು ಮತ್ತು ಗ್ರಾಹಕರು ನಷ್ಟಕ್ಕೊಳಗಾಗುವ ಪ್ರಮೇಯ ಬರುವುದಿಲ್ಲ. ಹಾಗಾಗಿ ಆ ಸೂಪರ್ ಲಗ್ಝುರಿ ರೈಲುಗಳ ಬದಲು ಅದೇ ಒಂದು ಲಕ್ಷ ಕೋಟಿ ರೂ. ಖರ್ಚು ಮಾಡಿ ದೇಶದೆಲ್ಲೆಡೆ ಕೃಷಿ ಶೀತಲ ಗೃಹಗಳನ್ನು ಕೇಂದ್ರ ಸರಕಾರ ಕಟ್ಟಿಸಿದ್ದರೆ ದೇಶದೆಲ್ಲೆಡೆಯ ರೈತರ ಬಾಳು ಹಸನಾಗುತ್ತಿದ್ದುದು ಖಂಡಿತ. ಮಧ್ಯಪ್ರದೇಶದಲ್ಲಿ ಹಿಂದಿನ ಹತ್ತು ವರ್ಷದಿಂದ ಬಿಜೆಪಿ ಸರಕಾರವಿದೆ. ಆದರೂ ಅಲ್ಲಿಯ ರೈತರದ್ದು ಇಂತಹ ಬವಣೆ. ದೇಶದ ಅಭಿವೃದ್ಧಿ ಎಂದರೆ ಕೇವಲ ನಗರಗಳ ಅಭಿವೃದ್ಧಿ ಮಾತ್ರವೇ? ಹಳ್ಳಿಯ ಕೃಷಿಕರ ಅಗತ್ಯಗಳ ಆಧುನೀಕರಣ ಆಗುವುದು ಎಂದು?