ಒಂದು ಗಂಡು, 13 ಹೆಣ್ಣು ಮಕ್ಕಳು... ಇನ್ನೊಂದು ಗಂಡಿಗಾಗಿ ಜಾರಿಯಲ್ಲಿದೆ ಪ್ರಯತ್ನ !
ಅಹ್ಮದಾಬಾದ್, ಎ.28: ಕಳೆದ ವರ್ಷ ಕನೂ ಸಂಗದ್ 16ನೇ ಮಗುವಿನ ಗರ್ಭಿಣಿಯಾಗಿದ್ದಾಗ ಗಂಡು ಮಗುವನ್ನು ನಿರೀಕ್ಷಿಸಿದ್ದಳು. ಆದರೆ ಮತ್ತೆ ಹುಟ್ಟಿದ್ದು ಹೆಣ್ಣುಮಗು. 34 ವರ್ಷದ ಈಕೆ ಹಾಗೂ ಪತಿ ರಾಮ್‌ಸಿಂಗ್ ಸಂಗದ್ ತಮ್ಮ ಎರಡನೇ ಗಂಡುಮಗುವಿಗಾಗಿ ಹಾತೊರೆಯುತ್ತಿದ್ದರು. ಇದೀಗ ಎರಡನೇ ಗಂಡುಮಗು ಪಡೆಯುವ ಪ್ರಯತ್ನದಲ್ಲಿ 13 ಹೆಣ್ಣುಮಕ್ಕಳು ಈ ದಂಪತಿಗೆ ಇದ್ದಾರೆ.
ಗುಜರಾತ್‌ನ ದಹೋದ್ ಜಿಲ್ಲೆಯ ಜರಿಬುಜ್ಹಿ ಗ್ರಾಮದ ರಮೇಶ್ (35) ಎಂಬ ರೈತನಿಗೆ ಇಬ್ಬರು ಗಂಡುಮಕ್ಕಳು ಬೇಕು ಎಂಬ ಹಂಬಲ. ಪತ್ನಿ ಕನೂ ಕೂಡಾ ಯಾವುದೇ ಪರ್ಯಾಯ ಇಲ್ಲದ ಕಾರಣ ಅದಕ್ಕೆ ಸಮ್ಮತಿಸಿದರು.
ಹಿಂದಿನ ಹೆರಿಗೆಗಳಲ್ಲಿನ ಆಕೆಯ ನೋವು ಆಕೆಯ ಕೃಶ ಶರೀರವನ್ನು ನೋಡಿದರೇ ಅರ್ಥವಾಗುತ್ತದೆ. "ನಮ್ಮ ಸಂಪ್ರದಾಯದಂತೆ ಸಹೋದರಿಯರ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದರೆ ಇಬ್ಬರು ಸಹೋದರರು ಬೇಕು. ಆದರೆ ದೇವರು ನಮಗೆ ಒಂದು ಗಂಡುಮಗುವನ್ನಷ್ಟೇ ಕರುಣಿಸಿದ್ದಾನೆ. ಇದೀಗ ಮತ್ತೆ ಹೆಣ್ಣುಮಗುವಾಗಿದೆ" ಎಂದು ಆರು ತಿಂಗಳ ಗರ್ಭಿಣಿಯಾದ ಕನೂ ವಿವರಿಸುತ್ತಾರೆ. 2013ರಲ್ಲಿ ಮೊದಲ ಗಂಡುಮಗು ವಿಜಯ್ ಹುಟ್ಟಿದ್ದ. ಆತನ ಚಿಕ್ಕತಂಗಿ ಡಿಂಗ್ಲಿ ಕಳೆದ ವರ್ಷದ ಆಗಸ್ಟ್‌ನಲ್ಲಿ ಹುಟ್ಟಿದ್ದಾಳೆ.
ಮತ್ತೆ ಗರ್ಭಿಣಿಯಾಗಿರುವ ಒತ್ತಡವನ್ನು ತಡೆದುಕೊಳ್ಳಲು ಇದೀಗ ದೇಹಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕನೂ ಒಪ್ಪಿಕೊಳ್ಳುತ್ತಾರೆ. "ಈ ಬಾರಿ ತೀರಾ ನಿಶ್ಶಕ್ತಿ ಇದೆ. ಆದರೆ ಬೇರೆ ದಾರಿ ಇಲ್ಲ. ಕುಟುಂಬದಲ್ಲಿ ಎಲ್ಲವನ್ನೂ ನಿರ್ಧರಿಸುವುದು ಗಂಡ. ನಾನು ಆತನನ್ನು ಮದುವೆಯಾಗಿರುವುದರಿಂದ ನನಗೆ ಗಂಡ ಹಾಗೂ ಮಕ್ಕಳು ಬಿಟ್ಟರೆ ಬೇರೆ ಜಗತ್ತು ಇಲ್ಲ" ಎಂದು ಆಕೆ ಹೇಳುತ್ತಾಳೆ.
ರಾಮ್‌ಸಿಂಗ್ ತೀರಾ ಬಡ ಕುಟುಂಬಕ್ಕೆ ಸೇರಿದ್ದು, ಅನಕ್ಷರಸ್ಥ. ಇವರ ಕುಟುಂಬ ಇದೀಗ ಆಹಾರವಿಲ್ಲದೇ ಒದ್ದಾಡುತ್ತಿದೆ. ಹಿರಿ ಮಗಳು ಸೇವಂತಾ (18) ಹಾಗೂ ನಂತರದ ಮಗಳು ನೀರೂ (16) ಅವರಿಗೆ ವಿವಾಹವಾಗಿದೆ. ನೀರೂ ಕೂಡಾ ತಾಯಿಯ ಹದಿನೇಳನೇ ಮಗುವಿನ ಜತೆಗೆ ಮೊದಲ ಮಗುವಿಗೆ ಜನ್ಮ ನೀಡಲು ಸಿದ್ಧಳಾಗಿದ್ದಾಳೆ.